

ಕೊಡಗು: ಕಳೆದ 3 ದಿನಗಳಿಂದ ಶ್ರೀಮಂಗಲದ ಶೆಟ್ಟಿಗೇರಿಯಲ್ಲಿ ಹಬ್ಬದ ಸಂಭ್ರಮ ಸಡಗರ ಮೂಡಿಸಿ ದಾಖಲೆಯ ಕ್ರೀಡಾಭಿಮಾನಿಗಳನ್ನು ಆಕರ್ಷಿಸಿದ್ದ ಚೆಟ್ಟಂಗಡ ಕುಟುಂಬ ಸಹಯೋಗದಲ್ಲಿ ನಡೆದ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ-2023 ನಮ್ಮೆಗೆ ಮಂಗಳವಾರ ಸಂಜೆ ವರ್ಣರಂಜಿತ ತೆರೆ ಬಿದ್ದಿತು.
ಟಿ.ಶೆಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಮಾಳೇಟೀರ (ಕುಕ್ಲೂರು) ತಂಡ ವಿನ್ನರ್ಸ್ ಪ್ರಶಸ್ತಿಯೊಂದಿಗೆ 50 ಸಾವಿರ ರೂ. ನಗದು ಬಹುಮಾನ, ಮಹಿಳೆಯರ ವಿಭಾಗದಲ್ಲಿ ಅಣ್ಣಳಮಾಡ ತಂಡ ವಿನ್ನರ್ಸ್ ಪ್ರಶಸ್ತಿಯೊಂದಿಗೆ 50 ರೂ. ಸಾವಿರ ನಗದ ಬಹುಮಾನ ಗಳಿಸುವ ಮೂಲಕ ಪ್ರತಿಷ್ಠೆ ಮೆರೆದವು.
ರನ್ನರ್ಸ್ ಪ್ರಶಸ್ತಿ ಹಾಗೂ ತಲಾ 30 ಸಾವಿರ ರೂ. ನಗದು ಬಹುಮಾನವನ್ನು ಪುರುಷರ ವಿಭಾಗದಲ್ಲಿ ಮಾಳೇಟೀರ (ಕೆದಮುಳ್ಳೂರು) ತಂಡ ಮತ್ತು ಮಹಿಳೆಯರ ವಿಭಾಗದಲ್ಲಿ ಅಜ್ಜಮಾಡ ತಂಡ ಪಡೆದವು
ಮೂರನೇ ಸ್ಥಾನವನ್ನು ಪುರುಷರ ವಿಭಾಗದಲ್ಲಿ ಚಂಗುಲಂಡ ತಂಡ ಮತ್ತು ಮಹಿಳೆಯರ ವಿಭಾಗದಲ್ಲಿ ಕಾಂಡಂಡ ತಂಡ ಗಳಿಸುವ ಮೂಲಕ ತಲಾ 20 ಸಾವಿರ ರೂ. ನಗದು ಮತ್ತು ಪ್ರಶಸ್ತಿ ತನ್ನದಾಗಿಸಿಕೊಂಡವು.
ಪಂದ್ಯಾವಳಿಯಲ್ಲಿ 102 ಪುರುಷರ ತಂಡ ಹಾಗೂ 75 ಮಹಿಳೆಯರ ತಂಡ ಭಾಗವಹಿಸಿದ್ದವು. ಅಂತಿಮವಾಗಿ ಸೆಮಿಫೈನಲ್‌ಗೆ ಪುರುಷರ ವಿಭಾಗದಲ್ಲಿ ಚಂಗುಲಂಡ- ಮಾಳೇಟೀರ (ಕೆದಮುಳ್ಳೂರು) ಮತ್ತು ಮಾಳೇಟೀರ (ಕುಕ್ಲೂರು- ಕೊಟ್ಟಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಳೇಟೀರ (ಕುಕ್ಲೂರು)- ಮಾಳೇಟೀರ (ಕೆದಮುಳ್ಳೂರು) ತಂಡಗಳು ಗೆಲುವು ಸಾಧಿಸಿ ಫೈನಲ್ ತಲುಪಿದವು. ಮಹಿಳೆಯರ ವಿಭಾಗದಲ್ಲಿ ಸೆಮಿಫೈನಲ್‌ನಲ್ಲಿ ಅಣ್ಣಳಮಾಡ- ಕಡೇಮಾಡ ಮತ್ತು ಕಾಂಡಂಡ- ಅಜ್ಜಮಾಡ ತಂಡಗಳ ಪಂದ್ಯದಲ್ಲಿ ಅಣ್ಣಳಮಾಡ-ಅಜ್ಜಮಾಡ ಗೆಲುವು ಸಾಧಿಸಿ ಫೈನಲ್ ತಲುಪಿದವು.
ಚೆಟ್ಟಂಗಡ ಕುಟುಂಬ ತಂಡದಿಂದ ಸಾಂಸ್ಕೃತಿಕ ನೃತ್ಯ, ತಿಂಗಕೊರ್ ಮೊಟ್ಟ್ ತಲಕಾವೇರಿ ತಂಡದಿಂದ ಪರೆಯಕಳಿ, ಮಹಿಳಾ ತಂಡದಿಂದ ನೃತ್ಯ, ಚೆಟ್ಟಂಗಡ ಲೇಖನ ಅಕ್ಕಮ್ಮರಿಂದ ಭರತನಾಟ್ಯ ಗಮನ ಸೆಳೆಯಿತು. ಚೆಟ್ಟಂಗಡ ಕುಟುಂಬ ಕಾರ್ಯದರ್ಶಿ ರವಿಸುಬ್ಬಯ್ಯ ವೀಕ್ಷಕ ವಿವರಣೆಯೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು.
ಅಂಪೈರ್ ಮತ್ತು ತಾಂತ್ರಿಕ ಸಮಿತಿ ವಿಭಾಗದಲ್ಲಿ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಆರ್ಯ ಪೊನ್ನಪ್ಪ, ಆಯುಷ್ ಪೊನ್ನಪ್ಪ, ಕೊಣಿಯಂಡ ಮಂಜು ಮಾದಯ್ಯ, ದೀಕ್ಷಿತ್ ಮಾದಯ್ಯ, ಮುಂಡಚಾಡೀರ ಭರತ್, ಚಂಗುಲಂಡ ಸತೀಶ್, ಉಳುವಂಗಡ ಲೋಹಿತ್ ಭೀಮಯ್ಯ ನಿರ್ವಹಿಸಿದರು.
ಮುಂದಿನ ವರ್ಷ ಪಂದ್ಯಾವಳಿ ಆಯೋಜಿಸುತ್ತಿರುವ ಬೊಟ್ಟೋಲಂಡ ಕುಟುಂಬಕ್ಕೆ ಕೊಡವ ಹಗ್ಗಜಗ್ಗಾಟ ಅಕಾಡೆಮಿ ಮತ್ತು ಚೆಟ್ಟಂಗಡ ಕುಟುಂಬದ ವತಿಯಿಂದ ಧ್ವಜವನ್ನು ಹಸ್ತಾಂತರಿಸಲಾಯಿತು. ಮೈದಾನದಲ್ಲಿ ಆತಿಥೇಯ ಚೆಟ್ಟಂಗಡ, ಟ್ರೋಫಿ ಪಡೆದ ತಂಡಗಳ ಕುಟುಂಬ ಸೇರಿ ಕ್ರೀಡಾಭಿಮಾನಿಗಳು ಸಾಮೂಹಿಕವಾಗಿ ವಾಳಗಾತಾಟ್‌ನೊಂದಿಗೆ ಸಂಭ್ರಮಿಸಿದರು.
ಸಮಾರೋಪ ಸಮಾರಂಭ
ಹಗ್ಗಜಗ್ಗಾಟ ಕ್ರೀಡೆ ರೋಗ್ಯ ವೃದ್ಧಿಗೆ ಸಹಕಾರಿ
ನಿವೃತ ಕರ್ನಲ್ ಬಾಳೆಯಡ ಸುಬ್ರಮಣಿ ಅಭಿಪ್ರಾಯ
ಹಗ್ಗಜಗ್ಗಾಟ ಕ್ರೀಡೆ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿ ಎಂದು ಮಾಜಿ ಒಲಂಪಿಯನ್ ನಿವೃತ ಕರ್ನಲ್ ಬಾಳೆಯಡ ಸುಬ್ರಮಣಿ ಅಭಿಪ್ರಾಯಪಟ್ಟರು.
ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಪಂದ್ಯಾವಳಿಯನ್ನು ಯಶಸ್ವಿಯಾಗಿ ಅಯೋಜಿಸಿರುವುದಕ್ಕೆ ಚೆಟ್ಟಂಗಡ ಕುಟುಂಬವನ್ನು ಶ್ಲಾಘಿಸಿದರು. ಸಾಹಸ ಕ್ರೀಡೆಯಾಗಿರುವ ಹಗ್ಗಜಗ್ಗಾಟ ಕ್ರೀಡೆ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿ. ಕ್ರೀಡೆಗೆ ಕೊಡವ ಕುಟುಂಬಗಳು ಉತ್ತೇಜನ ನೀಡುತ್ತಿದ್ದು, ಮುಂದೆಯೂ ಯಶಸ್ವಿಯಾಗಿ ಕ್ರೀಡಾಕೂಟ ನಡೆಯಲಿ ಎಂದರು.
ತಾವಳಗೇರಿ ಮೂಂದ್ ನಾಡ್ ನಾಡ್ ತಕ್ಕರಾದ ಕೈಬುಲೀರ ಹರೀಶ್ ಅಪ್ಪಯ್ಯ ಮಾತನಾಡಿ ಹಾಕಿ, ಕ್ರಿಕೆಟ್, ಮತ್ತು ಈಗ ಹಗ್ಗಜಗ್ಗಾಟ ಕ್ರೀಡೆಯಿಂದ ಚದುರಿ ಹೋಗಿರುವ ಕೊಡವ ಕುಟುಂಬಗಳು ಒಂದೆಡೆ ಸೇರಲು ಅವಕಾಶ ಕಲ್ಪಿಸಿದೆ. ಗ್ರಾಮೀಣ ಕ್ರೀಡೆಯಾದ ಖೋಖೋ ಮತ್ತು ಕಬಡ್ಡಿಗೂ ಮುಂದಿನ ದಿನಗಳಲ್ಲಿ ಕ್ರೀಡಾಕೂಟ ಆಯೋಜಿಸುವ ಮೂಲಕ ಉತ್ತೇಜನ ದೊರೆಯುವಂತಾಗಲಿ ಎಂದು ಆಶಿಸಿದರು.
ಕೂರ್ಗ್ ಹಾಕಿ ಅಕಾಡೆಮಿ ಕಾರ್ಯದರ್ಶಿ ಮಾಳೇಟೀರ ಶ್ರೀನಿವಾಸ್, ಪೊನ್ನೋಲ ತಂಡ ಭವ್ಯ ಪೊನ್ನಪ್ಪ, ಟಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷೆ ಚೊಟ್ಟೆಯಾಂಡಮಾಡ ಸರಿತಾ ತಮ್ಮಯ್ಯ, ಚೆಟ್ಟಂಗಡ ಕುಟುಂಬ ಅಧ್ಯಕ್ಷ ವಿಜಯ ಕಾರ್ಯಪ್ಪ, ಕುಟುಂಬದ ಹಿರಿಯರಾದ ಅರಸು ಅಚ್ಚಪ್ಪ, ವಿಠಲ ಬೋಪಣ್ಣ, ಡಾಲಿ, ಕಟ್ಟಿ ಮುಂದಿನ ವರ್ಷ ನಾಪೋಕ್ಲುವಿನಲ್ಲಿ 3ನೇ ವರ್ಷದ ಹಗ್ಗ ಜಗ್ಗಾಟ ಪಂದ್ಯಾವಳಿ ಅಯೋಜಿಸುತ್ತಿರುವ ಬೊಟ್ಟೋಲಂಡ ಕುಟುಂಬದ ಗಣಪತಿ, ಮಿಟ್ಟು ಪೂಣಚ್ಚ, ರಮೇಶ್ ಸೋಮಯ್ಯ ಭಾಗವಹಿಸಿದ್ದರು.ಮುಖ್ಯ ಅತಿಥಿಯಾಗಿ ಹಿರಿಯ ಹೈಕೋರ್ಟ್ ವಕೀಲ, ರಾಜ್ಯ ಸರ್ಕಾರದ ಮಾಜಿ ಅಡ್ವಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಆಗಮಿಸಿ ಪಂದ್ಯ ವೀಕ್ಷಿಸಿದರು.