

ಶಿರಸಿ: ಗ್ರಾಮೀಣ ಭಾಗದಲ್ಲಿ ಸಂಪ್ರದಾಯಂತೆ ನಡೆದು ಬಂದಿರುವ ಮತ್ಸ್ಯ ಬೇಟೆಯಲ್ಲಿ ನೂರಾರು ಜನರು ಬುಧವಾರ ಕೆರಗೆ ಇಳಿದು ಮತ್ಸ್ಯ ಬೇಟೆಯಾಡಿ ಸಂಭ್ರಮಿಸಿದರು.
ತಾಲೂಕಿನ ಮಾಳಂಜಿ ಗ್ರಾಮದಲ್ಲಿ ಆಯೋಜಿಸಿದ್ದ ಕೆರೆ ಬೇಟೆಯಲ್ಲಿ ನೂರಾರು ಬೇಟೆಗಾರರು ಖೂಣಿಯೊಂದಿಗೆ ಕೆರೆಗಿಳಿದು ಮೀನುಗಳನ್ನು ಹಿಡಿದು ಖುಷಿಪಟ್ಟರು.
ಮಾಳಂಜಿ ಗ್ರಾಮದ ಸುತ್ತಲಿನ ಬಂಕನಾಳ, ಮತ್ತಿಹಳ್ಳಿ, ಕಾಯಗುಡ್ಡೆ, ಬಿಳೂರು, ರಂಗಾಪುರ, ಬಿಸಲಕೊಪ್ಪ, ದಾಸನಕೊಪ್ಪ ಸೇರಿ ಹತ್ತಾರು ಹಳ್ಳಿಯ ನೂರಾರು ಜನರು ಮತ್ಸ್ಯ ಬೇಟೆಯಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದರು. 800ಕ್ಕೂ ಹೆಚ್ಚು ಖೂಣಿಗಳು ಕೆರೆ ಬೇಟೆಯಲ್ಲಿ ಭಾಗಿಯಾಗಿದ್ದವು. ಪ್ರತಿ ಖೂಣಿಗೆ 200 ರೂಪಾಯಿ ನಿಗದಿ ಪಡಿಸಲಾಗಿತ್ತು. ಇದರಿಂದ ಬಂದ ಆದಾಯವನ್ನು ಗ್ರಾಮದ ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಸಂಘಟಕ ಚಂದ್ರಪ್ಪ ನಾಯ್ಕ ತಿಳಿಸಿದರು.
ಕೆರೆ ಬೇಟೆಯನ್ನು ಗ್ರಾಮೀಣ ಭಾಗದ ಜನರು ಹಬ್ಬದಂತೆ ಸಂಭ್ರಮಿಸುತ್ತಾರೆ. ಮೀನು ಎಲ್ಲರಿಗೂ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ. ಆದರೂ ಎಲ್ಲರೂ ಪಾಲ್ಗೊಳ್ಳುತ್ತಾರೆ ಎಂದು ಯುವಕ ಸಂದೀಪ ನಾಯ್ಕ ತಿಳಿಸಿದರು.