ಮಾಲೀಕರಿಗೆ ಮರಳಿದ ರೈಲಿನಲ್ಲಿ ಕಳೆದುಹೋದ ಚಿನ್ನದ ಸರ

gold chain 1
Published on

ಮೈಸೂರು: ರೈಲಿನಲ್ಲಿ ಕಳೆದುಹೋದ ಚಿನ್ನದ ಸರ ಮಾಲೀಕರಿಗೆ ಮರಳಿಸಲಾಗಿದೆ.

ರೈಲು ಸಂಖ್ಯೆ 16231ರಲ್ಲಿ (ತಿರುಚಿರಾಪಳ್ಳಿ-ಕೆಎಸ್‌ಆರ್ ಬೆಂಗಳೂರು) ಪ್ರಯಾಣಿಸಿದ ಸಾಂಗವಿ ಎಂಬ ಪ್ರಯಾಣಿಕರು ಜೂ.9ರಂದು ‘ರೈಲ್ ಮದದ್’ ಜಾಲತಾಣದ ಮೂಲಕ ಚಿನ್ನದ ಸರ ಕಳೆದುಹೋದ ಬಗ್ಗೆ ದೂರು ನೀಡಿದ್ದಾರೆ.

ತಾನು ಶೌಚಕ್ಕೆ ಹೋಗಿದ್ದಾಗ ಚಿನ್ನದ ಸರ ಶೌಚ ಕೊಠಡಿಯಲ್ಲಿ ಬಿದ್ದಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದರು. ಈ ದೂರನ್ನು ದಾಖಲಿಸಿ ಮೈಸೂರಿನಲ್ಲಿ ಪ್ರಾಥಮಿಕ ನಿರ್ವಹಣೆ ಮಾಡಲಾಯಿತು.

ದೂರನ್ನು ಪೂರಕವಾಗಿ ಗಮನಿಸಿ, ನಿರ್ವಹಣಾ ತಂಡವು ಬಯೋ ಟಾಯ್ಲೆಟ್ ಟ್ಯಾಂಕ್ ಅನ್ನು ತೆರೆದು ಶುದ್ಧಪಡಿಸುವ ಕಾರ್ಯಾಚರಣೆ ವೇಳೆ, ಕಳೆದು ಹೋದ ಚಿನ್ನದ ಸರವನ್ನು ಪತ್ತೆ ಹಚ್ಚಿತು.

ಆ ಚಿನ್ನದ ಸರವನ್ನು ತಕ್ಷಣವೇ ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಅಧಿಕಾರಿಗಳಿಗೆ ಹಸ್ತಾಂತರಿಸಿ, ಅಗತ್ಯ ಕಾನೂನು ಕ್ರಮಗಳು ಕೈಗೊಳ್ಳಲಾಯಿತು. ಬಳಿಕ ಮಾಲೀಕರಿಗೆ ಸುರಕ್ಷಿತವಾಗಿ ಹಿಂತಿರುಗಿಸುವ ಕ್ರಮ ಕೈಗೊಳ್ಳಲಾಯಿತು.

ಈ ಘಟನೆ ರೈಲ್ವೆ ನಿರ್ವಹಣಾ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯ ಸಮನ್ವಯತೆ ಮತ್ತು ಬದ್ಧತೆಯನ್ನು ತಿಳಿಸುತ್ತದೆ. ಪ್ರಯಾಣಿಕರಿಂದ ಕಳೆದುಹೋದ ವಸ್ತುಗಳನ್ನು ಪತ್ತೆಹಚ್ಚಿ ಹಿಂತಿರುಗಿಸಲು ರೈಲ್ವೆ ಶ್ರಮಿಸುತ್ತಿರುವುದನ್ನು ಬಿಂಬಿಸುತ್ತದೆ.

ಪ್ರಯಾಣಿಕರು ಯಾವುದೇ ವಸ್ತು ಕಳೆದುಹೋದರೆ ಅಥವಾ ತೊಂದರೆ ಎದುರಾದರೆ ತಕ್ಷಣವೇ ರೈಲ್ ಮದದ್ ಮೂಲಕ ದೂರು ನೀಡಬೇಕು ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net