

ಕಲಬುರಗಿ: ವಾಹನಗಳ ಬಳಕೆ ಹೆಚ್ಚಾಗಿದ್ದು, ಇದರಿಂದ ವಾಯು ಮಾಲಿನ್ಯಗೊಂಡು ಶುದ್ಧ ಗಾಳಿಗೆ ಪರದಾಡುವಂತಾಗಿದೆ. ಜೀವ ವೈವಿಧ್ಯತೆಗೆ ಭಾರಿ ಪೆಟ್ಟು ಬಿದ್ದು ಅಸಮತೋಲನವಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಉಪ ಸಾರಿಗೆ ಆಯುಕ್ತ ಸಿದ್ದಪ್ಪ ಕಲ್ಲೇರ್ ಹೇಳಿದರು.
ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಉಪ ಸಾರಿಗೆ ಆಯುಕ್ತರು, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮತ್ತು ವಿಟಿಯು ಮೆಕಾನಿಕಲ್ ವಿಭಾಗದಿಂದ ಗುರುವಾರ ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಉದ್ಘಾಟಿಸಿ ಮಾತನಾಡಿ, ಸ್ವಚ್ಛ ಪರಿಸರಕ್ಕೆ ಆದ್ಯತೆ ನೀಡದಿದ್ದರೆ ಮುಂದೆ ಅಪಾಯ ತಪ್ಪಿದ್ದಲ್ಲ ಎಂದರು.
ಹೆಚ್ಚು ಆಮ್ಲಜನಕ ಹೊಂದಿರುವ ಶುದ್ಧ ಗಾಳಿ ಪ್ರತಿಯೊಬ್ಬರಿಗೂ ಬೇಕು. ಡಿಸೆಂಬರ್, ಜನವರಿಯಲ್ಲಿ ದೆಹಲಿಯಲ್ಲಿ ದಟ್ಟವಾದ ಮಂಜಿನಂತ ಹೊಗೆ ಜಮೆಯಾಗಿ ಜನರು ಪರದಾಡುತ್ತಾರೆ. ನಮ್ಮಲ್ಲಿನ ಜನರು ಎಚ್ಚೆತ್ತುಕೊಂಡು ವಾಯು ಮಾಲಿನ್ಯ ನಿಯಂತ್ರಣ ಮಾಡದಿದ್ದರೆ, ನಮಗೂ ದೆಹಲಿ ಸ್ಥಿತಿ ಬರಬಹುದು ಎಂದು ಎಚ್ಚರಿಸಿದರು.
ವಿಟಿಯು ಪ್ರಾಧ್ಯಾಪಕರಾದ ಪ್ರೊ.ಶುಭಾಂಗಿ ಡಿ.ಸಿ. ಪ್ರೊ.ಬ್ರಿಜ್‌ಭೂಷಣ ಹಾಗೂ ಸಿಡಾಕ್ ಸಂಸ್ಥೆಯ ಸಂಯೋಜಕ ವರುಣಕುಮಾರ, ಭಾಲ್ಕಿ ಎಆರ್‌ಟಿಒ ಜಾಫರ್ ಸಿದ್ದಕಿ ಉಪನ್ಯಾಸ ನೀಡಿದರು. ವಿಟಿಯು ನಿರ್ದೇಶಕ ಡಾ.ಬಸವರಾಜ ಗಾದಗೆ ಕರಪತ್ರ ಬಿಡುಗಡೆ ಮಾಡಿದರು.
ಪ್ರಾದೇಶಿಕ ಸಾರಿಗೆ ಆಯುಕ್ತ ನೂರ್ ಮಹ್ಮದ್ ಭಾಷಾ, ಪ್ರೊ.ಎಸ್.ಎ.ಖಾದ್ರಿ, ಸಂಯೋಜಕ ಪ್ರೊ.ಆನಂದ ಮಾಲಿಪಾಟೀಲ್, ಪ್ರೊ.ಶಿಲ್ಪಾ, ಪ್ರೊ.ದಯಾನಂದ ಇತರರಿದ್ದರು. ಡಾ.ಶಂಭುಲಿAಗ ನಿರೂಪಣೆ ಮಾಡಿ ವಂದಿಸಿದರು.