

ತುಮಕೂರು: ಕೋವಿಡ್-19 ಸೇರಿ ಎಲ್ಲ ರೀತಿಯ ಸೂಕ್ಷ್ಮಾಣು ಜೀವಿಗಳಿಂದ ಬರುವ ರೋಗಗಳನ್ನು ಪತ್ತೆ ಹಚ್ಚುವ ಮಾಲಿಕ್ಯುಲರ್ ಬಯೋ ಲ್ಯಾಬ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಗುರುವಾರ ಉದ್ಘಾಟಿಸಿದರು.
ನಗರದ ಎಸ್‌ಎಸ್ ವೃತ್ತದಲ್ಲಿ ಕಲ್ಯಾಣಿ ಬಯೋಟೆಕ್ ಆರಂಭಿಸಿರುವ ಮಾಲಿಕ್ಯುಲರ್ ಬಯೋ ಲ್ಯಾಬ್ ರಾಷ್ಟ್ರೀಯ ಮಾನ್ಯತೆ ಪಡೆದ ಬಯೋಲ್ಯಾಬ್(ಎನ್‌ಎಬಿಎಲ್) ಆಗಿದ್ದು, ಎಲ್ಲ ರೀತಿಯ ಸೂಕ್ಷ್ಮಾಣು ಜೀವಿಗಳಿಂದ ಬರಬಹುದಾದ ವೈರಸ್ ರೋಗಗಳನ್ನು ಪತ್ತೆ ಹಚ್ಚಬಹುದಾದ ಅತ್ಯಾಧುನಿಕ ಉಪಕರಣಗಳು ಹೊಂದಿರುವ ಸೂಕ್ಷ್ಮಾಣು ಜೀವಶಾಸ್ತ್ರ ಪ್ರಯೋಗಾಲಯ ಇದಾಗಿದೆ.
ಮಾಲಿಕ್ಯುಲರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಖಾಸಗಿ ವಲಯದಲ್ಲಿ ಸುಸಜ್ಜಿತ ಪ್ರಯೋಗಾಲಯದ ಅಗತ್ಯವಿತ್ತು. ಒಂದೇ ಸೂರಿನಡಿ ಎಲ್ಲ ಟೆಸ್ಟ್‌ಗಳ ಸೇವೆ ಸಿಗಲಿದೆ ಎಂದರು. ಕಲ್ಯಾಣಿ ಬಯೋಟೆಕ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಬೆಳ್ಳಿ ಲೋಕೇಶ್ ಮಾತನಾಡಿ, ಗುಣಮಟ್ಟದ ಪ್ರಯೋಗಾಲಯ ಸ್ಥಾಪಿಸಲಾಗಿದ್ದು, ಜನತೆ ಯಾವುದೇ ಭಯವಿಲ್ಲದೆ ಕೋವಿಡ್-19 ಸೇರಿ ಎಲ್ಲ ರೀತಿಯ ಸೂಕ್ಷ್ಮಾಣು ರೋಗಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದರು.
ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಟಿಎಂಸಿಸಿ ಅಧ್ಯಕ್ಷ ಎನ್.ಎಸ್.ಜಯಕುಮಾರ್, ಎಸ್ಪಿ ಡಾ.ಕೆ.ವಂಶಿಕೃಷ್ಣ, ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಡಿಎಚ್‌ಒ ಡಾ.ನಾಗೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು. ಪ್ರಯೋಗಾಲಯ ವಿಭಾಗದ ತಜ್ಞರಾದ ಡಾ.ಪ್ರಶಾಂತ್,ಡಾ.ನಂದಿನಿ, ಡಾ.ಪ್ರಕಾಶ್ ಹಾಗೂ ಡಾ.ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.