ಮಾರ್ದನಿಸಿದ ಜಗ್ಗಲಗಿ ನಾದ

h11-Jaggalige 3
Published on

ಹುಬ್ಬಳ್ಳಿ : ಹೋಳಿ ಹುಣ್ಣಿಮೆ ಅಂಗವಾಗಿ ನಡೆಯುವ ರಂಗಪಂಚಮಿ ವಿಶೇಷತೆಗೆ ಮತ್ತೊಂದು ಮೆರುಗು ನೀಡಿರುವ ಜಗ್ಗಲಗಿ ಹಬ್ಬ ಬುಧವಾರ ನಗರದಲ್ಲಿ ಅದ್ದೂರಿಯಾಗಿ ನೆರವೇರಿತು.

ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 40ಕ್ಕೂ ಹೆಚ್ಚು ಚರ್ಮವಾದ್ಯ ತಂಡಗಳು, 500ಕ್ಕೂ ಹೆಚ್ಚು ಕಲಾವಿದರಿದ್ದ ಜಗ್ಗಲಗಿ ಹಬ್ಬದ ಮೆರವಣಿಗೆಯನ್ನು ಮೂರುಸಾವಿರ ಮಠದ ಶಾಲೆ ಆವರಣದಲ್ಲಿ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಕೆಎಲ್​ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಹಬ್ಬ ಆಯೋಜಕ ಮಹೇಶ ಟೆಂಗಿನಕಾಯಿ, ಇತರರು ಹಲಗಿ ಬಾರಿಸುವ ಮೂಲಕ ಉದ್ಘಾಟಿಸಿದರು.

ಇಡೀ ಮೈದಾನದಲ್ಲಿ ಜಗ್ಗಲಗಿ ನಾದ ಮಾರ್ದನಿಸುತ್ತಿತ್ತು.

ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ಜಗ್ಗಲಗಿ ಹಬ್ಬ ಮಹತ್ವ ಪಡೆದುಕೊಳ್ಳುತ್ತಿದೆ. ಇದು ಕನ್ನಡ ನಾಡಿನ ಸಾಂಸ್ಕೃತಿಕ ಉತ್ಸವವಾಗಿ ಪರಿವರ್ತನೆಯಾಗಿದೆ. ಜಾನಪದ ಸಂಸ್ಕೃತಿಯನ್ನು ಬಿತ್ತರಿಸುತ್ತಿದೆ. ಪ್ಲಾಸ್ಟಿಕ್ ಹಲಿಗೆಗಳ ಅಬ್ಬರದ ಮಧ್ಯೆ ಚರ್ಮವಾದ್ಯಗಳು ಇಲ್ಲಿ ಮೇಳೈಸಿರುವುದು ಸಂತಸದ ವಿಷಯ ಎಂದರು.

ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ, ಹುಕ್ಕೇರಿಯ ಶ್ರೀ ಶಿವಬಸವ ಸ್ವಾಮೀಜಿ, ನರಗುಂದ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಭಂಡಿವಾಡದ ಶ್ರೀ ಗುರುಸಿದ್ಧ ಸ್ವಾಮೀಜಿ, ಶ್ರೀ ಅಮರಸಿದ್ಧೇಶ್ವರ ಸ್ವಾಮೀಜಿ, ಶ್ರೀ ಗುರು ಮಹೇಶ್ವರ ಸ್ವಾಮೀಜಿ, ತುಪ್ಪದ ಕುರಹಟ್ಟಿಯ ಶ್ರೀ ವಾಗೀಶ ಪಂಡಿತ ಸ್ವಾಮೀಜಿ, ಅಕ್ಕಿಆಲೂರಿನ ಶ್ರೀ ಶಿವಬಸವ ಸ್ವಾಮೀಜಿ, ರಾಯನಾಳದ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿ ಸೇರಿ ಅನೇಕ ಶ್ರೀಗಳು ಉಪಸ್ಥಿತರಿದ್ದರು.

ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಯೋಜಕ ಮಹೇಶ ಟೆಂಗಿನಕಾಯಿ, 2016ರಿಂದ ಆರಂಭವಾದ ಹಲಿಗೆ ಹಬ್ಬ ಇದೀಗ 5ನೇ ವರ್ಷಕ್ಕೆ ಕಾಲಿಟ್ಟಿದೆ. ಹೋಳಿ ಹಬ್ಬದ ವೈಶಿಷ್ಟ್ಯನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ, ಕಲಾವಿದರನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಆರಂಭಿಸಿದ ಹಬ್ಬ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಈ ವರ್ಷ 28 ಮಠಾಧೀಶರು ಆಗಮಿಸಿ ಆಶೀರ್ವದಿಸಿರುವುದು ಇನ್ನಷ್ಟು ವಿಶೇಷತೆ ತಂದಿದೆ ಎಂದರು.

ಗಣ್ಯರಾದ ವಿಜಯ ಶೆಟ್ಟರ್, ರಮೇಶ ಶೆಟ್ಟಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ರಾಜಶೇಖರ ಮೆಣಸಿನಕಾಯಿ, ಅರವಿಂದ ಕುಬಸದ, ಶಿವು ಮೆಣಸಿನಕಾಯಿ, ಡಿ.ಕೆ. ಚವ್ಹಾಣ, ಸತೀಶ ಶೇಜವಾಡಕರ, ಸುಭಾಸಸಿಂಗ್ ಜಮಾದಾರ, ಇತರರು ಪಾಲ್ಗೊಂಡಿದ್ದರು. ತಿಪ್ಪಣ್ಣ ಮಜ್ಜಗಿ ಸ್ವಾಗತಿಸಿದರು.

ಮೂರುಸಾವಿರ ಮಠದಿಂದ ಸಾಲಾಗಿ ಹೊರಟ, ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಜಗ್ಗಲಗಿ ತಂಡದವರು ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ಶಕ್ತಿ ರಸ್ತೆ, ಸ್ಟೇಷನ್ ರಸ್ತೆ, ಗಣೇಶಪೇಟೆ, ಮರಾಠ ಗಲ್ಲಿ, ಬ್ರಾಡ್​ವೇ, ದುರ್ಗದಬೈಲ್, ಷಾ ಬಜಾರ್ ಮೂಲಕ ಗಂಗಾಧರ ನಗರ ಸಮುದಾಯ ಭವನ ತಲುಪಿದರು.

ಮಾರ್ಗದುದ್ದಕ್ಕೂ ಕಲಾ ತಂಡಗಳ ಪ್ರದರ್ಶನವನ್ನು ಸಾವಿರಾರು ಜನರು ವೀಕ್ಷಿಸಿದರು. ಮರಗಾಲು ಕುಣಿತ, ನವಿಲುಗರಿ ಕಟ್ಟಿಕೊಂಡ ತಂಡದ ಕುಣಿತಗಳೂ ಗಮನ ಸೆಳೆದವು. ಜಗ್ಗಲಗಿಯ ಲಯಬದ್ಧ ಶಬ್ದ ಕೇಳುತ್ತ ಅನೇಕ ವೀಕ್ಷಕರು ಸಹ ಬರಿಗೈಯಲ್ಲೇ ತಾಳ ಹಾಕುತ್ತ ಹರ್ಷ ವ್ಯಕ್ತಪಡಿಸಿದರು. ಕಲಾವಿದರಿಗೆ ಅಲ್ಲಲ್ಲಿ ನೀರು, ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net