ಮಾರ್ಚ್‌ನೊಳಗೆ ಬೆಳೆ ವಿಮೆ ವಿತರಿಸದಿದ್ದರೆ ಹೋರಾಟ

Siddaveerappa
Published on

ಚಿತ್ರದುರ್ಗ: ಜಿಲ್ಲಾದ್ಯಂತ ಸತತ 14 ದಿನ ಸುರಿದ ಮಳೆಯಿಂದಾಗಿ ಬಹುತೇಕ ಬೆಳೆಗಳು ಸಂಪೂರ್ಣ ನಷ್ಟವಾಗಿವೆ. ಹೀಗಾಗಿ, 2025ರ ಮಾರ್ಚ್‌ನೊಳಗೆ ಬೆಳೆ ವಿಮೆ ಪರಿಹಾರ ವಿತರಿಸುವಂತೆ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷಿ, ತೋಟಗಾರಿಕೆ ಹಾಗೂ ವಿಮಾ ಕಂಪನಿ ಅಧಿಕಾರಿಗಳು ವಿಮೆ ಪಾವತಿಸಿರುವ ರೈತರ ಹೊಲಗಳಲ್ಲಿ ಸಮೀಕ್ಷೆ ಕೈಗೊಂಡು ತ್ವರಿತವಾಗಿ ಬೆಳೆ ವಿಮೆ ವಿತರಿಸಬೇಕು ಎಂದರು.

ಪ್ರಸಕ್ತ ಮುಂಗಾರು ಆರಂಭದಲ್ಲಿ ರೈತಸಮೂಹಕ್ಕೆ ಆಶಾದಾಯಕವಾಗಿತ್ತು. ಆದರೆ, ಆನಂತರವೂ ಸುರಿದ ಮಳೆಯಿಂದಾಗಿ ಬೆಳೆ ನಷ್ಟವಾಯಿತು. ಪ್ರಸಕ್ತ ಎರಡು ಬಾರಿ ಬಿತ್ತನೆ ಕೈಗೊಂಡರೂ ಸಂಪೂರ್ಣ ಆಪೋಶನವಾಗಿ ಕಂಗಾಲಾಗಿದ್ದಾರೆ. ಆದ್ದರಿಂದ ಬೆಳೆಗಳ ಉತ್ಪಾದನೆಗೆ ಖರ್ಚು ಮಾಡಿರುವ ಪೈಕಿ ಎಕರೆಗೆ ಕನಿಷ್ಠ 10 ಸಾವಿರ ರೂ. ಪರಿಹಾರವನ್ನಾದರೂ ರಾಜ್ಯ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಹೆಚ್ಚು ಮಳೆಯಾದ ವ್ಯಾಪ್ತಿಗಳಲ್ಲಿನ ಎಲ್ಲ ಕೆರೆ-ಕಟ್ಟೆ, ಅಚ್ಚುಕಟ್ಟು ಪ್ರದೇಶ, ಕ್ಯಾಚ್ಮೆಂಟ್ ಏರಿಯಾಗಳನ್ನು ಸುಸ್ಥಿತಿಯಲ್ಲಿಡಬೇಕು. ತಮಿಳುನಾಡಿನಿಂದ ಬೆಳೆ ಕಟಾವಿಗಾಗಿ ಬರುವವರು ಮನಬಂದಂತೆ ಹಣ ಕೇಳುತ್ತಾರೆ. ಆದ್ದರಿಂದ ಇಲಾಖೆ ಅಧಿಕಾರಿಗಳು ಸೂಕ್ತ ದರ ನಿಗದಿಪಡಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಗೌರವಾಧ್ಯಕ್ಷ ಎಸ್.ಬಿ.ನಿಜಲಿಂಗಪ್ಪ ಮಾತನಾಡಿ, ಕಂದಾಯ ಇಲಾಖೆ ಲೆಕ್ಕಾಧಿಕಾರಿಗಳು ಖಾತೆ ಮಾಡಿಕೊಡಲು ಹಳ್ಳಿಗಳಿಗೆ ಏಕೆ ಹೋಗುತ್ತಿಲ್ಲ?. ರೈತರು ಖರೀದಿಸುವ ಔಷಧ, ಗೊಬ್ಬರ, ಬಿತ್ತನೆ ಬೀಜಗಳಿಗೆ ರಸೀದಿ ಕೊಡುತ್ತಿಲ್ಲ. ಎಲ್ಲವೂ ಕಳಪೆಯಾಗಿದೆ ಎಂದು ಆರೋಪಿಸಿದ ಅವರು, ವಕ್ಫ್ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಸರ್ಕಾರ ಮುಂದಾಗಬಾರದು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಕಳೆದ ವರ್ಷ ಅನಾವೃಷ್ಟಿ, ಈ ಬಾರಿ ಅತಿವೃಷ್ಟಿಯಿಂದ ಈರುಳ್ಳಿ, ಅಡಕೆ ಸೇರಿ ಅನೇಕ ಬೆಳೆಗಳು ನಾಶವಾಗಿವೆ. ಜಂಟಿ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ನಿಖರ ವರದಿ ಸಲ್ಲಿಸಿ, ಪರಿಹಾರ ಕೊಡಿಸಬೇಕು. ಇಲ್ಲದಿದ್ದರೆ, ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಮಂಜುನಾಥ್, ರಂಗಸ್ವಾಮಿ, ಸದಾಶಿವಪ್ಪ, ಕೆ.ಟಿ.ತಿಪ್ಪೇಸ್ವಾಮಿ, ಸಿದ್ದರಾಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net