

ಹೊಳೆನರಸೀಪುರ: ಪಟ್ಟಣದ ಮಾರ್ಗವಾಗಿ ಹಾಸನ ಕಡೆಗೆ ತೆರಳುವ ಪ್ರಯಾಣಿಕರಿಗೆ ಮಾರ್ಗಸೂಚಿಸುವ ಫಲಕಗಳನ್ನು ಅಳವಡಿಸದೆ ಇರುವುದರಿಂದ ವಾಹನ ಸವಾರರು ದಾರಿ ತಪ್ಪುವಂತಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಗೆ ವಾಹನ ಸವಾರರು ದಿನನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.
ಬೇಲೂರು-ಬಿಳಿಕೆರೆ 373ರ ರಾಷ್ಟ್ರೀಯ ಹೆದ್ದಾರಿಯ ಹಂಗರಹಳ್ಳಿ ಬಳಿ ಇರುವ ರೈಲ್ವೆ ಮೇಲ್ಸೇತುವೆ ಕುಸಿದ ಪರಿಣಾಮ ಮುನ್ನೆಚ್ಚರಿಕೆಯಿಂದ ವಾಹನಗಳು ಚಲಿಸದಂತೆ ರಸ್ತೆಯನ್ನು ಬಂದ್ ಮಾಡಲಾಗಿದೆ. ಆದರೆ ಸಂಬಂಧಪಟ್ಟ ಇಲಾಖೆಯವರು ಪ್ರಯಾಣಿಕರು ಸಂಚರಿಸಲು ಮಾರ್ಗಸೂಚಿ ಫಲಕ ಅಳವಡಿಸಿದೆ ಲೋಪ ಎಸಗಿದ್ದಾರೆ. ಇದರಿಂದ ಪ್ರತಿನಿತ್ಯ ನೂರಾರು ವಾಹನ ಸವಾರರು ಹಾಗೂ ಪ್ರಯಾಣಿಕರು ದಾರಿತಪ್ಪಿ ಸಾಗುವಂತಾಗಿದೆ.
ಮೈಸೂರು ಕಡೆಯಿಂದ ಬರುವ ವಾಹನ ಸವಾರರು ಹೊಳೆನರಸೀಪುರ ಪಟ್ಟಣದ ಮಾರ್ಗವಾಗಿ ಫ್ಲೈಓವರ್ ಮೇಲೆ ಸಂಚರಿಸಿ ನೇರವಾಗಿ ಹಂಗರಹಳ್ಳಿ ಬಳಿ ಬಂದ್ ಆಗಿರುವ ರಸ್ತೆಯಲ್ಲಿ ನಿಲ್ಲುತ್ತಾರೆ. ಅಲ್ಲಿಂದ ಎಲ್ಲಿ ಹೋಗುವುದು ಎಂಬ ಗೊಂದಲಕ್ಕೀಡಾಗಿ ಮಾರ್ಗ ತಿಳಿಯಲು ದಾರಿಹೋಕರನ್ನು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಳೆನರಸೀಪುರ ಪಟ್ಟಣದಲ್ಲಿ ಮಾರ್ಗ ಬದಲಾವಣೆಯ ಸೂಚನಾ ಫಲಕಗಳನ್ನು ಎಲ್ಲಿಯೂ ಅಳವಡಿಸಿಲ್ಲ. ಮಾರ್ಗಸೂಚಿ ಫಲಕಗಳನ್ನು ಅಳವಡಿಸದೆ ಇರುವುದರಿಂದ ವಾಹನ ಸವಾರರು ಗೊತ್ತಿಲ್ಲದೆ ನೇರವಾಗಿ ಹಂಗರಹಳ್ಳಿ ತನಕ ಸಂಚರಿಸಿ ಮರಳಿ ಪಟ್ಟಣದ ಮೂಲಕ ಪಡುವಲಹಿಪ್ಪೆ ಮಾರ್ಗವಾಗಿ ಮತ್ತೆ ಹಂಗರಹಳ್ಳಿಯಿಂದ ಹಾಸನದ ಕಡೆ ಸಂಚರಿಸುತ್ತಾರೆ. ಇಲ್ಲಿ ಹಳ್ಳಿಗಳ ಮೇಲೆ ಕಿರಿದಾದ ರಸ್ತೆಯಲ್ಲಿ ತೆರಳಿ ಮೊಸಳೆ ಹೊಸಹಳ್ಳಿ ಬಳಿ ಮುಖ್ಯರಸ್ತೆಯನ್ನು ತಲುಪಬೇಕಾಗಿದೆ.