ಮಾರ್ಗಸೂಚಿ ಉಲ್ಲಂಸಿದರೆ ಮತ್ತೆ ಲಾಕ್‌ಡೌನ್!, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ, ಸರ್ಕಾರದ ಮಾರ್ಗಸೂಚಿ ಪಾಲನೆಗೆ ಸೂಚನೆ

cm leed
Published on

ದೊಡ್ಡಬಳ್ಳಾಪುರ: ಆರ್ಥಿಕ ಪುನಶ್ಚೇತನಕ್ಕಾಗಿ ಲಾಕ್‌ಡೌನ್ ತೆರವುಗೊಳಿಸಲಾಗಿದೆ. ಸಾರ್ವಜನಿಕರು ಕರೊನಾ ನಿಯಮ ಪಾಲಿಸದೆ ಸೋಂಕು ಹೆಚ್ಚಾದರೆ ಪುನಃ ಲಾಕ್‌ಡೌನ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ದೊಡ್ಡಬಳ್ಳಾಪುರದಲ್ಲಿ ನಿರ್ಮಾಣವಾಗಿರುವ 70 ಹಾಸಿಗೆ ಸಾಮರ್ಥ್ಯದ ಮೇಕ್‌ಶ್‌ಟಿ ಆಸ್ಪತ್ರೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಲಾಕ್‌ಡೌನ್ ಪರಿಣಾಮ ಸಾರ್ವಜನಿಕರು ವ್ಯಾಪಾರ ವಹಿವಾಟು ಬಿಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಸರ್ಕಾರದ ಶ್ರಮದಿಂದ ಸೋಂಕು ಹತೋಟಿಗೆ ತಂದಿದ್ದು, ಸಾರ್ವಜನಿಕರಿಗೆ 15 ದಿನಗಳ ಕಾಲ ಲಾಕ್‌ಡೌನ್ ತೆಗೆದು ವ್ಯಾಪಾರ ವಹಿವಾಟುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ಜವಾಬ್ದಾರಿ ಹೆಚ್ಚಾಗಿದ್ದು, ಸರ್ಕಾರದ ಕೋವಿಡ್ ನಿಯಮವನ್ನು ಚಾಚೂ ತಪ್ಪದೆ ಪಾಲಿಸಬೇಕು. ಇಲ್ಲವಾದಲ್ಲಿ ಜನರ ತಪ್ಪುಗಳೇ ಮತ್ತೆ ಲಾಕ್‌ಡೌನ್ ಸಂಕಷ್ಟಕ್ಕೆ ಕಾರಣವಾಗಬಹುದು ಎಂದರು.

ವೈದ್ಯರ ನಡೆ ಹಳ್ಳಿಕಡೆ ಯಶಸ್ವಿ: ವೈದ್ಯರ ನಡೆ ಹಳ್ಳಿಕಡೆ ಕಾರ್ಯಕ್ರಮ ರಾಜ್ಯದಲ್ಲಿ ಯಶಸ್ವಿಯಾಗಿದ್ದು, ಸ್ಥಳದಲ್ಲೆ ಕೋವಿಡ್ ಪರೀಕ್ಷೆ ಮಾಡಿ ಔಷಧ, ಕೋವಿಡ್ ಕಿಟ್ ವಿತರಣೆಯ ಮೂಲಕ ಸೋಂಕನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿ ಕಂಡಿದೆ. ದೇಶದಲ್ಲಿ ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಬಹುತೇಕ ಜಿಲ್ಲೆಗಳು ಈ ಕಾರ‌್ಯಕ್ರಮವನ್ನು ಅಳವಡಿಸಿಕೊಂಡು ಉತ್ತಮ ಲಿತಾಂಶ ಪಡೆದಿವೆ ಎಂದು ಸಿಎಂ ತಿಳಿಸಿದರು.

ಕೋವಿಡ್ ಮೂರನೇ ಅಲೆ ಎದುರಿಸಲು ಸಜ್ಜು: ಕೋವಿಡ್ ಮೂರನೇ ಅಲೆ ಎದುರಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದ್ದು, ಯಾವುದೇ ವೈದ್ಯಕೀಯ ಸೇವೆಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಕರೊನಾ ಸಂದರ್ಭದಲ್ಲೂ ಕೇವಲ 30 ದಿನಗಳ ಅವಧಿಯಲ್ಲಿ ದೊಡ್ಡಬಳ್ಳಾಪುರದ ಮೇಕ್ ಶ್‌ಟಿ ಆಸ್ಪತ್ರೆ ನಿರ್ಮಾಣ ಸರ್ಕಾರದ ಕೆಲಸಕ್ಕೆ ಹಿಡಿದ ಕನ್ನಡಿ ಎಂದ ಸಚಿವರು, ಈ ಹಂತದಲ್ಲಿ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಮಕ್ಕಳ ಆರೋಗ್ಯ ತಪಾಸಣೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ರಾಜ್ಯದ ಬಹುತೇಕ ಎಲ್ಲ ವೈದ್ಯರಿಗೆ ತರಬೇತಿ ನೀಡಲಾಗಿದೆ ಎಂದರು.

ವೈದ್ಯರ ನಡೆ ಹಳ್ಳಿಕಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರಂಭ ಮಾಡಲಾಯಿತು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕೆಎಂಎಫ್‌ನಿಂದ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಕೋವಿಡ್ ಸಂಕಷ್ಟದಲ್ಲಿ ಸಿಎಂ ಯಡಿಯೂರಪ್ಪ ನಿರಂತರ ಕೆಲಸ ಮಾಡಿದ್ದಾರೆ ಎಂದರು.

ಪ್ರತಿ ಪಕ್ಷಗಳ ಟೀಕೆಗಳು ಸಾಮಾನ್ಯ. ಸೋಂಕು ನಿಯಂತ್ರಣದಲ್ಲಿ ಮಾದರಿ ಎನಿಸಿದ್ದ ಪಕ್ಕದ ಕೇರಳದಲ್ಲಿ ಇನ್ನೂ ಸೋಂಕು ಹತೋಟಿಗೆ ಬಂದಿಲ್ಲ. ಆದರೆ ಇಂತಹ ಟೀಕೆಗಳ ನಡುವೆಯೂ ಕರ್ನಾಟಕ ಕೋವಿಡ್ ಸೋಂಕು ನಿಯಂತ್ರಣದಲ್ಲಿ ಮಾದರಿಯಾಗಿದೆ. ಈ ಮೂಲಕ ರಾಜ್ಯ ಬಿಜೆಪಿ ಸರ್ಕಾರದ ಕ್ರಾಂತಿಕಾರಕ ಕಾರ‌್ಯ ಮಾಡಿ ಟೀಕಾಕಾರರಿಗೆ ಬಾಯಿ ಮುಚ್ಚಿಸಿದೆ ಎಂದರು.

ಕರೊನಾ ತಡೆಯುವಲ್ಲಿ ಸರ್ಕಾರ ಯಶ: ಸಂಪತ್ತು ಬಂದಾಗ ದಾನ, ಬಡತನ ಬಂದಾಗ ಧ್ಯಾನ, ಅಧಿಕಾರಿ ಬಂದಾಗ ಸೇವೆ ಮಾಡಬೇಕು. ಈ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್ ವಿರುದ್ಧ ಯಶಸ್ವಿಯಾಗಿ ಕಾರ‌್ಯ ನಿರ್ವಹಿಸುತ್ತಿವೆ ಎಂದು ಬೆಂ.ಗ್ರಾ.ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ ನಾಗರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರ ಕೋವಿಡ್‌ಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಯಾವುದೇ ಮೆಡಿಕಲ್ ಕಾಲೇಜು ಇಲ್ಲ, ದೊಡ್ಡ ಆಸ್ಪತ್ರೆ ಇಲ್ಲ. ಹೀಗಾಗಿ ಮೊದಲ ಪ್ರಾಶಸ್ತ್ಯ ನೀಡಿ ಮೇಕ್‌ಶ್‌ಟಿ ಆಸ್ಪತ್ರೆ ನೀಡಲಾಗಿದ್ದು, ಇದಕ್ಕೆ ಕಾರಣರಾದ ಸಿಎಂ ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಶಾಸಕರಿಂದ ಬೇಡಿಕೆ: ತಾಲೂಕಿನಲ್ಲಿ ಅಂತರ್ಜಲಮಟ್ಟ ಕುಸಿಯುತ್ತಿರುವ ಪರಿಣಾಮ ಎತ್ತಿನಹೊಳೆ ನೀರನ್ನು ದೊಡ್ಡಬಳ್ಳಾಪುರಕ್ಕೆ ಶೀಘ್ರವೇ ನೀಡಲು ಒತ್ತು ನೀಡಿ ಎಂದು ಶಾಸಕ ಟಿ.ವೆಂಕಟರಮಣಯ್ಯ ಸಿಎಂಗೆ ಮನವಿ ಮಾಡಿದರು.

ವೃಷಭಾವತಿ ನೀರನ್ನೂ ದೊಡ್ಡಬಳ್ಳಾಪುರಕ್ಕೆ ಹರಿಸಲು ಕ್ರಮ ವಹಿಸಬೇಕು. ರೈತರ ರಾಗಿ ಖರೀದಿ ಮಾಡಿದ ಸರ್ಕಾರ, ಹಣ ಬಿಡುಗಡೆ ಮಾಡಿಲ್ಲ. ಪರಿಣಾಮ ರೈತರ ಬಿತ್ತನೆ ಕಾರ್ಯಕ್ಕೂ ಸಾಲ ಮಾಡುವ ಪರಿಸ್ಥಿತಿ ಇದೆ. ಕೂಡಲೆ ಹಣ ಬಿಡುಗಡೆ ಮಾಡಬೇಕು. ವೈದ್ಯಕೀಯ, ನರ್ಸಿಂಗ್ ಕಾಲೇಜು ಹಾಗೂ ತಾಲೂಕಿನ ಕೇಂದ್ರಕ್ಕೆ ದೂರದಲ್ಲಿರುವ ಸಾಸಲು ಹೊಬಳಿಗೆ ಪಿಯುಸಿ ಕಾಲೇಜಿಗೆ ಅನುಮೊದನೆ ನೀಡಬೇಕು. ಇದಕ್ಕೆ ಸಂಬಂಧಪಟ್ಟ ಭೂಮಿ ಒದಗಿಸಲು ನಾವು ಸಿದ್ಧತೆ ಮಾಡಿಕೊಂಡುದ್ದೇವೆ ಎಂದು ಶಾಸಕರು ತಿಳಿಸಿದರು.

ದಾನಿಗಳು, ವೈದ್ಯರಿಗೆ ಸನ್ಮಾನ: 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮೇಕ್‌ಶ್‌ಟಿ ಆಸ್ಪತ್ರೆ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಿರುವ ಖಾಸಗಿ ವಲಯದ ಲಿನೋವ ಹಾಗು ಗೋಲ್ಡ್ ಮ್ಯಾನ್ ಶಿಪ್ ಅಮೇರಿಕಾ ಕಂಪನಿ ನೌಕರರನ್ನು ಸನ್ಮಾನಿಸಲಾಯಿತು. ದೊಡ್ಡಬಳ್ಳಾಪುರದಲ್ಲಿ ಬ್ಲಾಕ್ ಸೋಂಕಿತನನ್ನು ಶಸ್ತ್ರ ಚಿಕಿತ್ಸೆ ಮೂಲಕ ಗುಣಪಡಿಸಿದ ಡಾ.ಸಂತೋಷ್ ಮತ್ತು ಅವರ ತಂಡ ಹಾಗೂ ಕೋವಿಡ್ ತಡೆಗೆ ಶ್ರಮಿಸಿದ ಹಿರಿಯ ವೈದ್ಯರನ್ನು ಸನ್ಮಾನಿಸಲಾಯಿತು.

ಹಾಜರಿದ್ದ ಗಣ್ಯರು: ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ದೇವನಹಳ್ಳಿ ಶಾಸಕ ನಿಸರ್ಗನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಎಸ್ಪಿ ಕೃಷ್ಣ ವಂಶಿ, ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿಬ್ಬೂರು ಜಯಣ್ಣ, ಬಿಜೆಪಿ ಯುವ ಮುಖಂಡ ಧೀರಜ್ ಮುನಿರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net