ಮಾರ್ಗಸೂಚಿ ಅನ್ವಯ ಸ್ವಾತಂತ್ರ್ಯ ದಿನಾಚರಣೆ

29-gdg-5
Published on

ಗದಗ: ಸರ್ಕಾರದ ಮಾರ್ಗಸೂಚಿಗಳನ್ವಯ ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣ, ಶಿಸ್ತು, ಸಂಯಮ ಹಾಗೂ ಸಂಭ್ರಮದಿಂದ ಆಚರಿಸಬೇಕು. ಈ ವೇಳೆ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ಹಾಗೂ ಪ್ಲಾಸ್ಟಿಕ್ ಧ್ವಜ ಬಳಕೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶವ್ಯಾಪಿ ಕೋವಿಡ್-19 ಸೋಂಕು ಹರಡುತ್ತಿರುವುದರಿಂದ ಸರ್ಕಾರದ ಮಾರ್ಗಸೂಚಿಗಳನ್ವಯ ಈ ಬಾರಿ ಸ್ವಾತಂತ್ರ್ಯ ದಿನ ಆಚರಿಸಬೇಕಿದೆ. ಸ್ವಾತಂತ್ರ್ಯೊತ್ಸವದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಪರಸ್ಪರ ಅಂತರ ಕಾಯ್ದು ಕೊಳ್ಳಬೇಕು, ಮಾಸ್ಕ್ ಧರಿಸಬೇಕು ಎಂದರು. ಸದ್ಯ ಶಾಲೆ- ಕಾಲೇಜುಗಳು ಪ್ರಾರಂಭವಾಗದಿರುವುದರಿಂದ ಪ್ರತಿವರ್ಷ ಜರಗುತ್ತಿದ್ದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳನ್ನು ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು. ಆದರೆ, ಪ್ರತಿವರ್ಷದಂತೆ ಗೌರವ ಧ್ವಜವಂದನೆ ನಡೆಯಲಿದೆ ಎಂದರು. ಕಾರ್ಯಕ್ರಮ ಜರಗುವ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪ್ರಮುಖ ಬೀದಿ, ಕಟ್ಟಡ ಹಾಗೂ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಮನ್ವಯತೆ ಕಾಯ್ದುಕೊಳ್ಳುವುದರ ಜತೆಗೆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಶಿಷ್ಟಾಚಾರ ಪಾಲಿಸಬೇಕು. ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿ, ಸಿಬ್ಬಂದಿ ಹಾಜರಿರಬೇಕು. ಧ್ವಜಾರೋಹಣ ಸಂದರ್ಭದಲ್ಲಿ ವ್ಯತಿರಿಕ್ತ ಘಟನೆಗಳು ಸಂಭವಿಸದಂತೆ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಎಂ. ಸತೀಶಕುಮಾರ ಮಾತನಾಡಿ, ಆ. 15ರಂದು ಗದಗ-ಬೆಟಗೇರಿ ಶಹರದ ಎಲ್ಲ ಶಾಲೆ-ಕಾಲೇಜ್, ಸಹಕಾರಿ, ರಾಷ್ಟ್ರೀಕೃತ ಬ್ಯಾಂಕ್​ಗಳು, ಸರ್ಕಾರಿ, ಅರೆ ಸರ್ಕಾರಿ ಹಾಗೂ ಸಂಘ- ಸಂಸ್ಥೆಗಳ ಕಟ್ಟಡಗಳ ಮೇಲೆ ಆಯಾ ಕಚೇರಿ ಹಾಗೂ ಸಂಘ- ಸಂಸ್ಥೆಗಳ ಮುಖ್ಯಸ್ಥರು ಬೆಳಗ್ಗೆ 7.30ಕ್ಕೆ ಧ್ವಜಾರೋಹಣ ನೆರವೇರಿಸಬೇಕು. ಅಂದು ಬೆಳಗ್ಗೆ 9 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಸಾರ್ವಜನಿಕ ಧ್ವಜಾರೋಹಣ ನೆರವೇರಿಸುವರು ಎಂದರು. ಉಸ್ತುವಾರಿ ಸಚಿವರಿಗೆ ಗೌರವ ರಕ್ಷೆ, ಪಥ ಸಂಚಲನ ದಳಗಳ ಆಯ್ಕೆ, ಸಚಿವರ ಸಂದೇಶ, ಸಾಧಕರಿಗೆ ಸನ್ಮಾನ, ಆಮಂತ್ರಣ ಪತ್ರಿಕೆ ಮುದ್ರಣ, ವೇದಿಕೆ ನಿರ್ವಣ, ಬಂದೋಬಸ್ತ್, ಉಸ್ತುವಾರಿ ಸಮಿತಿಗಳ ರಚನೆ, ಶಾಮಿಯಾನ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಹಾಗೂ ಉಪಾಹಾರ ವ್ಯವಸ್ಥೆ ಕುರಿತು ರ್ಚಚಿಸಲಾಯಿತು. ಜಿ.ಪಂ. ಸಿಇಒ ಡಾ. ಆನಂದ್ ಕೆ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net