ಮಾರ್ಕಂಡೇಯನ ತಪೋಭೂಮಿ ವಕ್ಕಲೇರಿ

23-klr-15
Published on

ಕೋಲಾರ: ಹಸಿರು ವನಸಿರಿಯ ನಡುವೆ ಕಂಗೊಳಿಸುತ್ತಿರುವ ವಕ್ಕಲೇರಿ ಮಾರ್ಕಂಡೇಶ್ವರ ಬೆಟ್ಟ ಆಸ್ತಿಕ ಮಹಾಶಯರ ಜತೆಗೆ ಸೌಂದಯೋರ್ಪಾಸಕರನ್ನು ಸೆಳೆಯುತ್ತಿರುವ ಪ್ರಸಿದ್ಧ ಶೈವ ಕ್ಷೇತ್ರ. ಜಗತ್ತಿಗೆ ಶ್ರದ್ಧಾ ಭಕ್ತಿಭಾವ ತೋರಿಸಿಕೊಟ್ಟ ಬಾಲಕ ಮಾರ್ಕಂಡೇಯನ ತಪೋಭೂಮಿ ಇದು ಎಂಬುದಕ್ಕೆ ಪುರಾವೆಗಳು ಸಿಗುತ್ತವೆ. ಇದನ್ನು ಕ್ರಮಪುರಿ ಹಾಗೂ ವರಪುರಿ ಎಂದೂ ಕರೆಯುತ್ತಿದ್ದುದುಂಟು.

ಅಲ್ಪಾಯುಷಿ ಬಾಲಕ ಮಾರ್ಕಂಡೇಯ ತನ್ನ ಆಯಸ್ಸು ಮುಗಿಯುತ್ತಾ ಬಂದಿದ್ದ ಸಂದರ್ಭದಲ್ಲಿ ಮೃತ್ಯುಂಜಯ ಮಂತ್ರ ಜಪಿಸುತ್ತಾ ಈ ಪ್ರದೇಶದಲ್ಲಿ ಶಿವನ ಆರಾಧನೆಯಲ್ಲಿ ತೊಡಗಿದ್ದಾಗ ಯಮಧರ್ಮರಾಜ ಬಂದು ಮಾರ್ಕಂಡೇಯನ ಪ್ರಾಣ ಕೊಂಡೊಯ್ಯಲು ಪಾಶ ಬೀಸುತ್ತಾನೆ. ಆಗ ಕುಪಿತಗೊಂಡ ಪರಶಿವನು ಯಮಧರ್ಮನ ಮೇಲೆ ತ್ರಿಶೂಲ ಪ್ರಯೋಗಿಸಿದ್ದಲ್ಲದೆ ಬಾಲಕ ಮಾರ್ಕಂಡೇಯನಿಗೆ ಚಿರಂಜೀವಿಯಾಗುವ ವರ ದಯಪಾಲಿಸುತ್ತಾನೆ. ಆದ್ದರಿಂದ ಈ ಪ್ರದೇಶ ವರಪುರಿ ಎಂದು ಹೆಸರಾಗಿದೆ.

ಯಮ ಮಾರ್ಕಂಡೇಯನ ಮೇಲೆ ಪಾಶ ಬೀಸಿದ ಕುರುಹಾಗಿ ದೇವಾಲಯ ಮುಂಭಾಗದ ಬಂಡೆ ಮೇಲಿಂದ ಗರ್ಭಗುಡಿವರೆಗೆ 100 ಅಡಿ ಉದ್ದದ ಕಪ್ಪು ಗೆರೆಯಿದ್ದು, ಇದು ಯಮನ ಪಾಶವೆಂದೂ, ಯಮನ ಮೇಲೆ ಶಿವನು ಎಸೆದ ತ್ರಿಶೂಲ ಬಂಡೆ ಕೊರೆದಿದ್ದರಿಂದ ಉಂಟಾದ ಹಳ್ಳ ದೇವಾಲಯ ಪ್ರಾಂಗಣದ ಒಳಗಿನ ನೀರಿನ ಚಿಲುಮೆಯಾಗಿದೆ ಎಂಬುದಾಗಿಯೂ ಐತಿಹ್ಯವಿದೆ.

ಬೆಟ್ಟದ ಮೇಲೆ ಪ್ರಶಾಂತ ವಾತಾವರಣದಲ್ಲಿ ಬೃಹತ್​ ಬಂಡೆ ಮೇಲೆ ಮಾರ್ಕಂಡೇಶ್ವರ ದೇವಾಲಯವಿದ್ದು. ದೇಗುಲ ಗಂಗರ ಕಾಲದ್ದೆಂದು ಹೇಳಲಾಗುತ್ತಿದ್ದರೂ ದಾಖಲೆ ಸಿಕ್ಕಿಲ್ಲ. ಕ್ರಿ.ಶ.11ನೇ ಶತಮಾನದಲ್ಲಿ ಚೋಳರು ಶಿಲ್ಪಕಲೆ ವೈಭವದ ಪ್ರಭಾವವನ್ನು ಕರ್ನಾಟಕದ ಮೇಲೆ ಬೀರಿದ್ದರಿಂದ 16ನೇ ಶತಮಾನದವರೆಗೆ ವಿವಿಧ ಹಂತಗಳಲ್ಲಿ ದೇವಾಲಯ ನಿಮಾರ್ಣ ಮಾಡಲಾಗಿದೆ. ಬೆಟ್ಟದ ತಪ್ಪಲಿನಲ್ಲಿ ಸಾಳ್ವ ದೊರೆ ನರಸಿಂಹ ಅರಸನ ಶಿಲಾಶಾಸನವೊಂದಿದೆ. ದ್ರಾವಿಡ ಶೈಲಿಯಲ್ಲಿ ನಿಮಾರ್ಣವಾಗಿರುವ ಈ ದೇವಾಲಯದ ಸುತ್ತ ಕಲ್ಲಿನ ಕೋಟೆಯಿದ್ದು, ಉತ್ತರ ದಿಕ್ಕಿನಲ್ಲಿ ಪ್ರತ್ಯೇಕ ದ್ವಾರವೊಂದಿದೆ. ಇತ್ತೀಚೆಗೆ ನಿಮಾರ್ಣಗೊಂಡಿರುವ ಬೃಹತ್​ ವಿಮಾನಗೋಪುರ ಹಾಗೂ ರಾಜಗೋಪುರಗಳು ಭಕ್ತರನ್ನು ಸ್ವಾಗತಿಸುತ್ತವೆ.

ಪೂರ್ವಾಭಿಮುಖವಾಗಿರುವ ಮಹಾದ್ವಾರದ ಮೂಲಕ ಒಳ ಪ್ರವೇಶಿಸಿದೊಡನೆ ಉಯ್ಯಾಲೆ ಗೋಪುರ ಸಿಗುತ್ತದೆ. ಸೀತಮ್ಮನ ತೊಟ್ಟಿಲು ಎಂದೂ ಇದನ್ನು ಕರೆಯುತ್ತಾರೆ. ಪ್ರಾಂಗಣದಲ್ಲಿ ಎರಡು ಕಂಬಗಳ ಮಂಟಪವಿದ್ದು, ಇದನ್ನು ಕಲ್ಯಾಣ ಅಥವಾ ವಸಂತ ಮಂಟಪವೆಂದೂ ಕರೆಯುತ್ತಾರೆ. ಪ್ರಾಕಾರದೊಳಗೆ ಪಾರ್ವತಿ, ವಿಘ್ನೇಶ್ವರ, ಸುಬ್ರಹ್ಮಣ್ಯ, ವೀರಭದ್ರ, ಸಪ್ತಮಾತೃಕೆಯರು, ಚಂಡಿಕೇಶ್ವರ, ಭೈರವೇಶ್ವರ ಹಾಗೂ ಶ್ರೀನಿವಾಸದೇವರ ಚಿಕ್ಕ ದೇವಸ್ಥಾನಗಳಿವೆ. ನವರಂಗದ ಕಂಬಗಳು ಕಲಾತ್ಮಕ ಶಿಲ್ಪಕಲೆಯಿಂದ ಕೂಡಿವೆ. ಇಂತಹ ಕಂಬವೊಂದರಲ್ಲಿ ತಲೆಎತ್ತಿ ನಿಂತಿರುವ ಬಸವನನ್ನು ಮತ್ತೊಂದು ಕೋನದಿಂದ ವೀಕ್ಷಿಸಿದರೆ ಹಸು ತನ್ನ ಕರುವಿಗೆ ಹಾಲುಣಿಸಿದಂತೆ ಕಂಡು ಬರುತ್ತದೆ. ಗರ್ಭಗುಡಿಯಲ್ಲಿ 5 ಅಡಿ ಎತ್ತರದ ಪರಶಿವ ಲಿಂಗವಿದೆ. ಬೆಟ್ಟದ ಮೇಲೆ ಕುಡಿಯುವ ನೀರು, ಶೌಚಾಲಯ, ಕಲ್ಯಾಣ ಮಂಟಪ ವ್ಯವಸ್ಥೆಯಿದೆ.

ಮೆಟ್ಟಿಲು, ರಸ್ತೆ ಇದೆ: ಮಾರ್ಕಂಡೇಶ್ವರ ದೇವಾಲಯ ಸರ್ಕಾರಕ್ಕಿಂತ ಸಾರ್ವಜನಿಕರಿಂದಲೇ ಹೆಚ್ಚಿನ ಅಭಿವೃದ್ಧಿ ಕಂಡಿದೆ ಎಂದರೆ ತಪ್ಪಾಗಲಾರದು. ಮುಜರಾಯಿ ಇಲಾಖೆಯ ಸಿ ಗ್ರೇಡ್​ ದೇವಾಲಯಗಳ ಪಟ್ಟಿಯಲ್ಲಿದೆ. 70ರ ದಶಕದಲ್ಲಿ ಪಟೇಲ್​ ವೆಂಕಟರಾಮೇಗೌಡರು ಬೆಟ್ಟಕ್ಕೆ ಸಾವಿರಾರು ಮೆಟ್ಟಿಲು ನಿರ್ಮಿಸಿಕೊಟ್ಟಿದ್ದಾರೆ. 1987ರಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರಿಂದ ರಚಿತವಾದ ದೇವಾಲಯ ದತ್ತಿ ಸಮಿತಿ ಹಲವು ಅಭಿವೃದ್ಧಿ ಕಾರ್ಯ ಮಾಡಿದೆ. ಕೇಂದ್ರ ಸರ್ಕಾರದ ಮೈಕ್ರೋವೇವ್​ ಗೋಪುರಗಳು ದೇವಾಲಯಕ್ಕೆ ಹೊಂದಿಕೊಂಡಂತೆ ನಿಮಾರ್ಣವಾಗಿದ್ದು, ಇವುಗಳನ್ನು ಸ್ಥಾಪಿಸಿದ ಸಂದರ್ಭದಲ್ಲಿ ರಸ್ತೆ ನಿಮಾರ್ಣವಾಗಿದೆ.

ನಡೆಯುವ ಕಾರ್ಯಕ್ರಮಗಳು: ಮಾರ್ಕಂಡೇಶ್ವರಸ್ವಾಮಿ ರಾಜ್ಯದ ಜನತೆಗಷ್ಟೇ ಅಲ್ಲದೆ ಆಂಧ್ರ, ತಮಿಳುನಾಡಿನ ಜನರಿಗೆ ಆರಾಧ್ಯ ದೈವ. ಪ್ರತಿವರ್ಷ ಆಷಾಢದ ಶುದ್ಧ ಚತುರ್ಥಿ ಹಾಗೂ ಪಂಚಮಿಯಂದು ನಡೆಯುವ ಮಾರ್ಕಂಡೇಯ ಜಯಂತಿ, ಮಾಘ ಶುದ್ಧ ಪೌರ್ಣಮಿಯಂದು ಜರುಗುವ ಬ್ರಹ್ಮ ರಥೋತ್ಸವ ಮತ್ತು ಇದರ ಸಲುವಾಗಿ ಜರುಗುವ ಜಾನುವಾರು ಜಾತ್ರೆ ಜನರನ್ನು ತನ್ನೆಡೆ ಸೆಳೆಯುತ್ತದೆ. ಶಿವರಾತ್ರಿಗೆ ಜಾಗರಣೆ, ಮಾರನೇ ದಿನ ಬೆಟ್ಟದ ಮೇಲೆ ನಡೆಯುವ ಜಾತ್ರೆಗೆ ಸಹಸ್ರಾರು ಜನ ಸೇರುತ್ತಾರೆ.

ರಾವಣಾಸುರ ಉತ್ಸವ: ಕೋಲಾರ ಜಿಲ್ಲೆಯ ಹಲವೆಡೆ ಮಹಾನ್​ ಶಿವಭಕ್ತ ರಾವಣಾಸುರನ ಆರಾಧನೆ ನಡೆಯುತ್ತದೆ. ಅದೇ ರೀತಿ ಶಿವರಾತ್ರಿಗೆ ಮುನ್ನ ವಕ್ಕಲೇರಿಯಲ್ಲಿ ಜರುಗುವ ಜಾತ್ರೆ ಸಂದರ್ಭದಲ್ಲಿ 10 ತಲೆಗಳ ರಾವಣಾಸುರನ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಇದು ಇಡೀ ಜಾತ್ರೆಯ ಆಕರ್ಷಣೆಯ ಕೇಂದ್ರ ಬಿಂದು.

ಹೀಗೆ ತಲುಪಬಹುದು: ಬೆಂಗಳೂರಿನಿಂದ 60 ಕಿಮೀ, ಕೋಲಾರದಿಂದ 12 ಕಿಮೀ, ಮಾಲೂರಿನಿಂದ 15 ಕಿಮೀ ದೂರದಲ್ಲಿರುವ ವಕ್ಕಲೇರಿಗೆ ಬಸ್​ ಸೌಕರ್ಯವಿದೆ. ಬೆಂಗಳೂರು-&ಚೆನ್ನೆ$ ಹೆದ್ದಾರಿಯಲ್ಲಿ ನರಸಾಪುರ ಬಳಿ ತಿರುವು ಪಡೆದರೆ 10 ಕಿಮೀ ದೂರ ಕ್ರಮಿಸಬೇಕಾಗುತ್ತದೆ. ವಕ್ಕಲೇರಿಯಿಂದ ಬೆಟ್ಟ 2 ಕಿಮೀ ದೂರದಲ್ಲಿದ್ದು, ಆಟೋ ಅಥವಾ ಸ್ವಂತ ವಾಹನದಲ್ಲಿ ತೆರಳಬಹುದು.

ದೇವಾಲಯದಲ್ಲಿ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಅದೇ ತಿಂಗಳಿನ ಅಮಾವಾಸ್ಯೆಯಂದು ಲಕ್ಷದಿಪೋತ್ಸವ ನೆರವೇರುತ್ತದೆ. ಆಷಾಢ ತೃತೀಯದಂದು ಮಾರ್ಕಂಡೇಯ ಜಯಂತಿ ನಡೆಯುತ್ತದೆ. ಪ್ರತಿ ಸೋಮವಾರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ದೇವಾಲಯ ಬಾಗಿಲು ತೆರೆದಿರುತ್ತದೆ. ಉಳಿದ ದಿನ 10ರಿಂದ 12ರ ತನಕ, ಭಾನುವಾರ 10ರಿಂದ 2ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ. ಎಸ್​.ರವಿಶಂಕರ್​ ದೀಕ್ಷಿತ್​, ಅರ್ಚಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net