ಮಾರುಕಟ್ಟೆಯಲ್ಲಿ ಹೆಚ್ಚಳವಾಗಲಿದೆ ಹತ್ತಿ ಬೆಲೆ

5mnv01
Published on

ಮಾನ್ವಿ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಹತ್ತಿ ಬೆಳೆಯುವುದರಿಂದ ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿ ಕೇಂದ್ರ ಆರಂಭಿಸುವಂತೆ ಭಾರತೀಯ ಹತ್ತಿ ನಿಗಮಕ್ಕೆ ಮಾಡಿದ್ದ ಮನವಿ ಮೇರೆಗೆ ಪಟ್ಟಣದಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಹತ್ತಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಮಾನ್ವಿ, ದೇವದುರ್ಗ, ಸಿಂಧನೂರು ಹಾಗೂ ರಾಯಚೂರು ನಗರದಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭಿಸುವುದಕ್ಕೆ ಕ್ರಮ ಕೈಗೊಂಡಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಹತ್ತಿ ಬೆಲೆ ಹೆಚ್ಚಳವಾಗಲಿದೆ ಎಂದರು.

ಭಾರತೀಯ ಹತ್ತಿ ನಿಗಮದ ಹುಬ್ಬಳ್ಳಿ ಶಾಖೆಯ ಖರೀದಿ ವಿಭಾಗದ ಸಹಾಯಕ ಕಾರ್ಯನಿರ್ವಹಕ ಅಧಿಕಾರಿ ಡಿ.ಅಜಯಕುಮಾರ ಮಾತನಾಡಿ, ಖರೀದಿ ಕೇಂದ್ರದಲ್ಲಿ ಹತ್ತಿ ಮಾರಾಟ ಮಾಡಲು ಇಚ್ಛಿಸುವ ರೈತರು ಪಹಣಿಯಲ್ಲಿ ಬೆಳೆ ಕಾಲಂನಲ್ಲಿ ಹತ್ತಿ ಎಂದು ನಮೂದಿಸಿರಬೇಕು. ಅರ್ಜಿ, ಆಧಾರ್ ಕಾರ್ಡ್, ಪಹಣಿಯೊಂದಿಗೆ ಹೆಸರು ನೋಂದಾಯಿಸಬೇಕು. ಹತ್ತಿಯಲ್ಲಿನ ತೇವಾಂಶ, ಹತ್ತಿ ತಳಿ ಆಧರಿಸಿ ರೈತರಿಗೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿಸಲಾಗುವುದು. ಈ ಕುರಿತ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗಲಿದೆ. ಪ್ರತಿ ಎಕರೆಗೆ 12 ಕ್ವಿಂಟಾಲ್‌ವರೆಗೆ ಹತ್ತಿ ಖರೀದಿಸಲಾಗುವುದು ಎಂದು ತಿಳಿಸಿದರು.

ಪ್ರಮುಖರಾದ ಜಿ.ನಾಗರಾಜ, ಬಸವನಗೌಡ ಆಲ್ದಾಳ, ಬಿ.ಕೆ.ಅಮರೇಶಪ್ಪ, ಶಾಂತಪ್ಪ, ವೀರೇಶ ಡಿ., ರಾಜಾ ಸುಭಾಷ ನಾಯಕ್, ಮಹಾಂತೇಶಸ್ವಾಮಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net