

ಸುನಿಲ್ ವಿ ಸೋಮತ್ತನಹಳ್ಳಿ ಚನ್ನರಾಯಪಟ್ಟಣ
ಆಯುಧ ಪೂಜೆ ಮತ್ತು ವಿಜಯ ದಶಮಿಯಂದು ಗಗನಕ್ಕೇರಿದ ಹೂವಿನ ದರ ಈಗ ಪಾತಳಕ್ಕೆ ಕುಸಿದಿದೆ. ಇದರಿಂದ ಹೂವಿನ ಬೇಸಾಯಕ್ಕೆ ಲಕ್ಷಗಟ್ಟಲೇ ಬಂಡವಾಳ ಸುರಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶನಿವಾರ ಎಪಿಎಂಸಿ ಹೂವಿನ ಮಾರುಕಟ್ಟೆಗೆ ಸೇವಂತಿ ಹೂವು ತೆಗೆದುಕೊಂಡು ಹೋದ ರೈತರು ಆವರಣದಲ್ಲಿಯೇ ಸುರಿದು ‘ಬಂದ ದಾರಿಗೆ ಸುಂಕವಿಲ್ಲ’ ಎಂದು ಮನೆಗೆ ಹಿಂದಿರುಗಿದ ದೃಶ್ಯಗಳು ಕಂಡು ಬಂದವು.
ಆಯುಧ ಪೂಜೆ, ವಿಜಯದಶಮಿ ದಿನದಂದು ಮೇರಾಬುಲ್, ಮ್ಯಾಂಗೋ ಎಲ್ಲೋ, ವ್ಯಾನಿಷ್, ಕೆಂಪು ಗುಲಾಬಿ ಹೂಗಳು ಪ್ರತಿ ಕೆಜಿಗೆ 500 ರೂ. ದಾಟಿತ್ತು. ಅಲ್ಲದೇ ವಿವಿಧ ತಳಿಯ ಸೆಂಟ್ ಎಲ್ಲೋ, ಸೆಂಟ್ ವೈಟ್, ಮಾರಿಗೋಲ್ಡ್, ಚಾಕಲೇಟ್ ಸೇವಂತಿ ಕೆ.ಜಿಗೆ 250 ರಿಂದ 350 ರೂ.ವರೆಗೆ, ಚೆಂಡು 80 ರಿಂದ 90 ರೂ.ವರೆಗೆ ಮಾರಾಟವಾಗಿತ್ತು.
ಸದ್ಯ ನಗರದ ಹೂವಿನ ಮಾರುಕಟ್ಟೆಯಲ್ಲಿ ಮೇರಾಬುಲ್ ಇತರ ಗುಲಾಬಿ ಹೂಗಳು 40 ರಿಂದ 90 ರೂ. ವರೆಗೆ ಮಾರಾಟವಾದರೆ, ವಿವಿಧ ತಳಿಯ ಸೇವಂತಿ ಹಾಗೂ ಚೆಂಡು, ವಿವಿಧ ಬಗೆಯ ಹೂವಿನ ಖರೀದಿಯೇ ನಡೆಯಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದಿಕ್ಕು ತೋಚದ ರೈತರು ಮಾರುಕಟ್ಟೆಯ ಆವರಣದಲ್ಲಿಯೇ ಬಿಸಾಡಿದರೆ, ಕೆಲ ರೈತರು ಹೂವಿನ ಮಂಡಿಗಳ ಎದುರೇ ಹೂವಿನ ಬ್ಯಾಗ್‌ಗಳನ್ನು ಇಟ್ಟು ಮನೆಗೆ ತೆರಳಿದರು.
ಚಿಕ್ಕಬಳ್ಳಾಪುರ ಸೇರಿ ನೆರೆಯ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಜಿಲ್ಲೆ ಸೇರಿದಂತೆ ಹಲವು ಕಡೆಯಿಂದ ಈಗ ಬೆಂಗಳೂರು ಹೂವಿನ ಮಾರುಕಟ್ಟೆಗೆ ಹೇರಳವಾಗಿ ಸೇವಂತಿ ಹೂವು ಬರುತ್ತಿದೆ. ಸದ್ಯ ಈ ಹೂವಿಗೆ ಬೇಡಿಕೆ ಕುಸಿದಿರುವುದರಿಂದ ಮಾರಾಟವಾಗದೇ ತಿಪ್ಪೆಗುಂಡಿ ಪಾಲಾಗುತ್ತಿದೆ.
ಬೆಲೆ ಕುಸಿತಕ್ಕೆ ಕಾರಣವೇನು?: ಕಳೆದ ನಾಲ್ಕೈದು ದಿನಗಳಿಂದ ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ವಿವಿಧ ಕಡೆಗಳಿಂದ ವಿವಿಧ ತಳಿಯ ಸೇವಂತಿ ಹಾಗೂ ಚೆಂಡು ಹೂವು ಹೊಸಕೋಟೆ ಬೆಂಗಳೂರು ಹೂವಿನ ಮಾರುಕಟ್ಟೆಗೆ ಟನ್‌ಗಟ್ಟಲೇ ಬರುತ್ತಿದೆ. ಮಳೆಯಿಂದ ಹೂವಿನಲ್ಲಿ ಗುಣಮಟ್ಟದ ಕೊರತೆ ಇರುವುದರಿಂದ ಒಂದೆಡೆ ಹೊರಗಡೆ ಮಾರುಕಟ್ಟೆಗಳಿಗೆ ರಫ್ತು ಆಗುತ್ತಿಲ್ಲ. ಮತ್ತೊಂದೆಡೆ ಸ್ಥಳೀಯವಾಗಿಯು ಹೂವಿಗೆ ಬೇಡಿಕೆ ಇಲ್ಲದಿರುವುದರಿಂದ ಹೂವಿನ ದರ ಕುಸಿತಕ್ಕೆ ಕಾರಣವಾಗಿದೆ. ಈಗ ಗುಲಾಬಿ ಹೂವಿನ ಇಳುವರಿ ಕಡಿಮೆಯಾಗಿರುವುದರಿಂದ ಸ್ವಲ್ಪ ಮಟ್ಟಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ವಹಿವಾಟು ನಡೆಯುತ್ತಿದೆ.
ರೈತರಿಗೆ ನಷ್ಟ: ಪ್ರತಿನಿತ್ಯ ಆದಾಯ ನೋಡಬಹುದೆಂಬ ಕಾರಣಕ್ಕೆ ಬಹುತೇಕ ರೈತರು ಒಂದೆರಡು ಗುಂಟೆಯಿಂದ ಹಿಡಿದು ಎಕರೆಗಟ್ಟಲೇ ಹೂವಿನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಹೇರಳವಾಗಿ ಸೇವಂತಿ, ಚೆಂಡು ಹೂ ಲೋಡುಗಟ್ಟಲೇ ಮಾರುಕಟ್ಟೆಗೆ ಬಂದಿದೆ. ಇಲ್ಲಿಂದ ಹೊರಗಡೆ ಮಾರುಕಟ್ಟೆಗಳಿಗೆ ಹೂ ರಫ್ತು ಆಗುತ್ತಿಲ್ಲ. ಹೂವಿನ ಬೆಲೆ ಕುಸಿತದಿಂದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಹೂ ಬೆಳೆಗಾರ ವೆಂಕಟೇಶ್.
ಇಬ್ಬರಿಗೂ ನಷ್ಟ: ಹಲವು ದಿನಗಳಿಂದ ಮಳೆಯಾಗುತ್ತಿದೆ. ಇಲ್ಲಿನ ಮಾರುಕಟ್ಟೆಗೆ ಹೇರಳವಾಗಿ ವಿವಿಧ ತಳಿಯ ಸೇವಂತಿ, ಚೆಂಡು ಹೂವು ಆವಕವಾಗುತ್ತಿದೆ. ಮಳೆಯಿಂದ ಹೂವಿನಲ್ಲಿ ಗುಣಮಟ್ಟದ ಕೊರತೆ ಕಾಡುತ್ತಿದೆ. ಇದರಿಂದ ಬೇರೆ ಕಡೆಗಳಿಗೆ ಪಾರ್ಸಲ್ ಹೋಗುತ್ತಿಲ್ಲ. ಅಲ್ಲದೇ ಸ್ಥಳೀಯವಾಗಿ ಹೂವು ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಹೂ ಬೆಳೆದ ರೈತರು ಹಾಗೂ ವಹಿವಾಟು ನಡೆಯದೇ ಹೂವಿನ ಮಂಡಿ ಮಾಲೀಕರು ನಷ್ಟ ಅನುಭವಿಸುವಂತಾಗಿದೆ ಎಂದು ಹೂವಿನ ವ್ಯಾಪಾರಿ ಬಾಬು ಹೇಳಿದರು.
ಕೊಳೆಯುತ್ತಿದೆ ಅಲಂಕಾರಿಕ ಪುಷ್ಪ
ತೂಬಗೆರೆ: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಸುರಿದ ಭಾರಿ ಮಳೆಗೆ ನರಸಿಂಹನಹಳ್ಳಿ ಕ್ರಾಸ್‌ನಲ್ಲಿನ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಅಲಂಕಾರಿಕ ಹೂವಿನ ಬೆಳೆ ಹಾನಿಯಾಗಿದ್ದು, ಜಮೀನಿನಲ್ಲೇ ಕೊಳೆತ ಹೂವನ್ನು ರೈತರು ತಿಪ್ಪೆಗೆ ಸುರಿದಿದ್ದಾರೆ. ನರಸಿಂಹನಹಳ್ಳಿಯ ಶ್ರೀಕಾಂತ್ ಮತ್ತು ನರಸೇಗೌಡ ಎಂಬ ರೈತರು ಸಿಲೋಷಿಯಾ ಎಂಬ ಅಲಂಕಾರಿಕ ಹೂ ಬೆಳೆ ನಾಟಿ ಮಾಡಿದ್ದರು. ಕೊಲ್ಕತ್ತಾ, ಬಾಂಬೆ, ಮುಂಬೈ, ಹೈದರಾಬಾದ್ ಸೇರಿ ಇನ್ನಿತರ ಕಡೆಗಳಿಗೆ ಇದನ್ನು ರಪ್ತು ಮಾಡಲಾಗುತ್ತಿತ್ತು. ಈ ಜಾತಿಯ ಅಲಂಕಾರಿಕ ಹೂಗಳಿಗೆ ಹೊರ ರಾಜ್ಯದಲ್ಲಿ ಹೆಚ್ಚಿನ ಬೇಡಿಕೆ ಇದ್ದು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಅತೀವೃಷ್ಟಿ ನಿರಾಸೆ ತರಿಸಿದೆ. ಕೈ ಸೇರಬೇಕಿದ್ದ ಲಕ್ಷಾಂತರ ರೂ.ಮೌಲ್ಯದ ಬೆಳೆಯನ್ನು ತಿಪ್ಪೆಗೆ ಸುರಿಯುವಂತಾಗಿದೆ ಈ ಬಗ್ಗೆ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾರೋಬ್ಬರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.