ಮಾರುಕಟ್ಟೆಯಲ್ಲಿ ವ್ಯಾಪಾರ ಭರಾಟೆ ಜೋರು

Published on

ಹನೂರು: ಆಯುಧಪೂಜೆ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದಲ್ಲಿ ಜನರು ಬೆಲೆ ಏರಿಕೆಯ ನಡುವೆಯೂ ಅಗತ್ಯ ವಸ್ತುಗಳನ್ನು ಖರೀದಿಸಿದರು. ಇದರಿಂದ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯಿತು.

ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳಿಗೆ ಹನೂರು ಕೇಂದ್ರಸ್ಥಾನ. ಹಾಗಾಗಿ ಆಯುಧಪೂಜೆ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಬಂಡಳ್ಳಿ, ಮಣಗಳ್ಳಿ, ಶಾಗ್ಯ, ಚಂಗವಾಡಿ, ಭೈರನಾಥ, ಅಜ್ಜೀಪುರ, ಎಲ್ಲೇಮಾಳ, ಮಾಲಾಪುರ, ಆರ್.ಎಸ್.ದೊಡ್ಡಿ, ಮಂಗಲ, ಕಣ್ಣೂರು, ಆನಾಪುರ, ಚನ್ನಾಲಿಂಗನಹಳ್ಳಿ, ಗುಂಡಾಪುರ ಹಾಗೂ ಇನ್ನಿತರ ಗ್ರಾಮದ ಜನರು ಮಧ್ಯಾಹ್ನದ ಬಳಿಕ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಹಣ್ಣು, ಹೂವು ಹಾಗೂ ಪೂಜಾ ಸಾಮಗ್ರಿ ಸ್ಟಾಲ್‌ಗಳಲ್ಲಿ ಹೆಚ್ಚು ಜನರು ಖರೀದಿಸುತ್ತಿದ್ದದ್ದು ಜೋರಾಗಿಯೇ ಇತ್ತು. ಬಟ್ಟೆ ಅಂಗಡಿ, ಬೇಕರಿಗಳಲ್ಲಿ ವ್ಯಾಪಾರ ಭರಾಟೆಯಿಂದ ಕೂಡಿತ್ತು. ಸಂಜೆಯ ವೇಳೆಗೆ ಪಟ್ಟಣಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿತ್ತು. ಇದರಿಂದ ಪಟ್ಟಣದ ವರ್ತಕರು ವ್ಯಾಪಾರ ವಹಿವಾಟಿನಲ್ಲಿ ಫುಲ್ ಬಿಸಿಯಾಗಿದ್ದರು.

ಬೆಲೆ ಏರಿಕೆಯ ನಡುವೆಯೂ ಖರೀದಿ: ನಾಲ್ಕೈದು ದಿನಗಳ ಹಿಂದೆ ಕಡಿಮೆ ಇದ್ದ ಹೂವಿನ ದರ ಆಯುಧಪೂಜೆಯ ಹಿನ್ನೆಲೆಯಲ್ಲಿ ಏರಿಕೆಯಾಗಿತ್ತು. ಮೀಟರ್‌ಗೆ 40 ರೂ. ದರವಿದ್ದ ಕನಕಾಂಬರ 80 ರೂ,. ಮಲ್ಲಿಗೆ 150 ರೂ. ಮುಲ್ಲೆ 100 ರೂ. ಚೆಂಡು ಹೂ 60 ರೂ., ಸೇವಂತಿಗೆ ಕೆ.ಜಿಗೆ 350 ರೂ., ಸುಗಂಧರಾಜ 320 ರೂ. ಹಾಗೂ ಹೂವಿನ ಹಾರಕ್ಕೆ 100 ರೂ. ಮೇಲ್ಪಟ್ಟ ದರವಿತ್ತು. ಇನ್ನು ಸೇಬು ಕೆ.ಜಿಗೆ 160 ರೂ., ದ್ರಾಕ್ಷಿ 120 ರೂ., ಕಿತ್ತಲೆ 100 ರೂ., ದಾಳಿಂಬೆ 180 ರೂ., ಮೂಸಂಬಿ 80 ರೂ., ಏಲಕ್ಕಿ ಬಾಳೆಗೆ 100 ರೂ. ದರವಿತ್ತು. ಹಾಗೆಯೇ ಬೂದು ಕುಂಬಳಕಾಯಿಗೆ ಬೇಡಿಕೆ ಹೆಚ್ಚಿದ್ದು, ಕೆ.ಜಿ 50 ರೂ.ಗೆ ಮಾರಾಟವಾಯಿತು. ಬಾಳೆದಿಂಡು ಹಾಗೂ ಜೋಡಿ ಕಬ್ಬಿನ ಸೋಗೆಗೆ 50 ರೂ. ದರವಿತ್ತು. ಹಬ್ಬದ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿದರೂ ಜನರು ಖರೀದಿಯಲ್ಲ್ಲಿ ತೊಡಗಿದ್ದರು. ಇದರಿಂದ ಹನೂರಿನಲ್ಲಿ ಆಯುಧಪೂಜೆ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net