ಮಾರುಕಟ್ಟೆ ಸೀಲ್​ಡೌನ್ ಮಾಡಿದ್ದಕ್ಕೆ ಆಕ್ರೋಶ

18 lxr 2
Published on

ಲಕ್ಷ್ಮೇಶ್ವರ: ಪಟ್ಟಣದ ಮಾರ್ಕೆಟ್ ಪ್ರದೇಶದಲ್ಲಿನ ಮೂವರಿಗೆ ಕರೊನಾ ಪಾಸಿಟಿವ್ ಬಂದಿದ್ದರಿಂದ ಇಡೀ ಪ್ರದೇಶವನ್ನು ಸೀಲ್​ಡೌನ್ ಮಾಡಿರುವ ಕ್ರಮ ಸರಿಯಲ್ಲಿ ಎಂದು ಆರೋಪಿಸಿ, ವ್ಯಾಪಾರಸ್ಥರು ಶನಿವಾರ ತಹಸೀಲ್ದಾರರೊಂದಿಗೆ ವಾಗ್ವಾದಕ್ಕಿಳಿದರು.

ಪಟ್ಟಣದ ಮುಖ್ಯ ಬಜಾರ್ ರಸ್ತೆಯಲ್ಲಿನ ವ್ಯಾಪಾರಸ್ಥರೊಬ್ಬರಿಗೆ 5 ದಿನಗಳ ಹಿಂದೆ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಮಾರ್ಕೆಟ್ ಸೀಲ್​ಡೌನ್ ಮಾಡಲಾಗಿದೆ. ಆದರೆ, 2 ದಿನದ ಹಿಂದೆಯಷ್ಟೇ ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿನ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಬಂದಿದ್ದು, ಆ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಇದರಿಂದ ಶುಕ್ರವಾರ ಸಂತೆಗೆ ಬಂದಿದ್ದ ಗ್ರಾಮೀಣ ಜನರು ಅಗತ್ಯ ವಸ್ತುಗಳು ಸಿಗದೇ ಬರಿಗೈಲಿ ಹೋಗಿದ್ದಾರೆ. ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಮಾರ್ಕೆಟ್ ರಸ್ತೆ ಬಂದ್ ಮಾಡುವುದು, ಕೆಲವೆಡೆ ಸಡಿಲಗೊಳಿಸುವುದು ಜನರ ಅಸಮಾಧಾನಕ್ಕೆ ಕಾರಣವಾಗುತ್ತದೆ ಮತ್ತು ಗ್ರಾಮೀಣ ಜನರಿಗೆ ತೊಂದರೆಯಾಗುತ್ತದೆ. ವ್ಯಾಪಾರ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಕರೊನಾ ಪಾಸಿಟಿವ್ ಬಂದಿರುವ ವ್ಯಕ್ತಿಗಳ ಅಂಗಡಿಗಳ ಸುತ್ತ ಮಾತ್ರ ಬಂದ್ ಮಾಡಿ ಅನಕೂಲ ಕಲ್ಪಿಸಬೇಕು ಎಂದು ವ್ಯಾಪಾರಸ್ಥರಾದ ಅಶೋಕ ಬಟಗುರ್ಕಿ, ಗಿರೀಶ ಅಗಡಿ, ಅಭಯ ಜೈನ್, ಮಹೇಶ ಹೊಗೆಸೊಪ್ಪಿನ, ವಿಜಯ ಹತ್ತಿಕಾಳ, ಸುಭಾಸ ಬಟಗುರ್ಕಿ, ಶಕ್ತಿ ಕತ್ತಿ ಇತರರು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ‘ಸೀಲ್​ಡೌನ್ ಪ್ರದೇಶದಲ್ಲಿ ಆಸ್ಪತ್ರೆ ಇರುವುದರಿಂದ ಜನ ಸಂಚಾರಕ್ಕೆ ಒಂದಿಷ್ಟು ಅವಕಾಶ ಕಲ್ಪಿಸಲಾಗಿದೆ. ಮುಖ್ಯ ಮಾರ್ಕೆಟ್ ಪ್ರದೇಶ ಬಂದ್ ಮಾಡಿರುವುದರಿಂದ ಸಾಕಷ್ಟು ತೊಂದರೆಯಾಗಿದೆ ಎಂಬ ಅರಿವಿದೆ. ಇವತ್ತಾಗಲೇ ವ್ಯಾಪಾರದ ಅವಧಿ ಮುಗಿದಿದೆ. ಭಾನುವಾರ ಪೂರ್ತಿ ದಿನ ಲಾಕ್​ಡೌನ್ ಇರುತ್ತದೆ. ಅಷ್ಟರಲ್ಲಾಗಲೇ ಈ ಪ್ರದೇಶದಲ್ಲಿನ ಕ್ವಾರಂಟೈನ್​ನಲ್ಲಿರುವ ಬಹುತೇಕರ ವರದಿ ಬರಲಿವೆ. ತೊಂದರೆ ತಪ್ಪಿಸುವ ನಿಟ್ಟನಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್, ಪುರಸಭೆ ಅಧಿಕಾರಿಗಳೊಂದಿಗೆ ರ್ಚಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net