

ಹಾಸನ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರ ಕಟ್ಟಿನಕೆರೆ ಮಾರುಕಟ್ಟೆ ವ್ಯಾಪಾರಿಗಳ ಒಕ್ಕೂಟದ ವತಿಯಿಂದ ಗುರುವಾರ ಶಾಸಕ ಸ್ವರೂಪ್ ಪ್ರಕಾಶ್ ಹಾಗೂ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಅವರಿಗೆ ನಗರಸಭೆ ಆವರಣದಲ್ಲಿ ಮನವಿ ಸಲ್ಲಿಸಲಾಯಿತು.
ನಗರಸಭೆ ವತಿಯಿಂದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಳಿಗೆಗಳನ್ನು ಅತಿ ಶೀಘ್ರವಾಗಿ ವರ್ತಕರ ಹೆಸರಿಗೆ ನೋಂದಾಯಿಸಿ ಬಾಡಿಗೆಗೆ ನೀಡಬೇಕು. ಹಾಗೂ ಮಹಾವೀರ ವೃತ್ತದಲ್ಲಿ ಅನಧಿಕೃತವಾಗಿ ರಸ್ತೆ ಒತ್ತುವರಿ ಮಾಡಿರುವ ವ್ಯಾಪಾರಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ವರ್ತಕರ ಸಂಘದ ಸದಸ್ಯ ಸುಬ್ಬಣ್ಣ ಮಾತನಾಡಿ, ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಸರ್ಕಾರದ ವತಿಯಿಂದ ಸಾಕಷ್ಟು ಹಣ ವ್ಯಯ ಮಾಡಿ ನೂತನವಾಗಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳನ್ನು ವರ್ತಕರ ಹೆಸರಿಗೆ ನೋಂದಾಯಿಸಲು ವಿಳಂಬ ಮಾಡಲಾಗುತ್ತಿದೆ. ಮಹಾವೀರ ವೃತ್ತದ ಸಮೀಪ ಸ್ಥಳೀಯ ಸಂಸ್ಥೆ ಜಿಲ್ಲಾಡಳಿತ ಹಾಗೂ ಸರ್ಕಾರದ ವತಿಯಿಂದ ಸುಂದರವಾದ ರಸ್ತೆ ಹಾಗೂ ಪಾದಚಾರಿ ಮಾರ್ಗ ಮತ್ತು ವಿದ್ಯುತ್ ದ್ವೀಪಗಳನ್ನು ಅಳವಡಿಸಲಾಗಿದೆ. ಆದರೆ ಕೆಲವು ವರ್ತಕರು ಪಾದಾಚಾರಿ ಮಾರ್ಗ ವತ್ತುವರಿ ಮಾಡಿ ಸಾರ್ವಜನಿಕರು ಹಾಗೂ ವಾಹನ ಓಡಾಟಕ್ಕೆ ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಾತ್ಕಾಲಿಕವಾಗಿ ಮಹಾವೀರ ವೃತ್ತದ ಬಳಿ ಹೂವಿನ ವ್ಯಾಪಾರ ಮಾಡಲು ಜಾಗ ನಿಗದಿ ಮಾಡಲಾಗಿತ್ತು. ಆದರೆ ಕೆಲವು ವರ್ತಕರು ಇದನ್ನೇ ದುರುಪಯೋಗಪಡಿಸಿಕೊಂಡು ಕುಟುಂಬ ಸದಸ್ಯರು, ಮಾರುಕಟ್ಟೆ ವರ್ತಕರು ಪಾದಾಚಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ವರ್ತಕರಿಗೆ ನಿಗಧಿ ಮಾಡಿರುವ ಜಾಗದಲ್ಲಿಯೇ ವ್ಯಾಪಾರ ಮಾಡಲು ಸೂಚನೆ ನೀಡಬೇಕು ಹಾಗೂ ಹೂವಿನ ವ್ಯಾಪಾರಸ್ಥರಿಗೆ ಮಾರುಕಟ್ಟೆಯ ಒಳಭಾಗದಲ್ಲಿ ಜಾಗ ನಿಗದಿಪಡಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಪ್ರತಿಕ್ರಿಯಿಸಿ ಅತಿ ಶೀಘ್ರವಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.