ಮಾರುಕಟ್ಟೆ-ಕೊಳೆಗೇರಿ ಚುನಾವಣೆ ಬಿಸಿ

h22-kanyanagar
Published on

ಹುಬ್ಬಳ್ಳಿ: ಆಸ್ತಿ ತೆರಿಗೆ ದರದಲ್ಲಿ ಗಣನೀಯ ಏರಿಕೆ ಹಾಗೂ ಕೊಳೆಗೇರಿ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ನಿರೀಕ್ಷಿತ ಯಶಸ್ಸು ಕಾಣದಿರುವುದು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಪ್ರಮುಖ ವಿಷಯಗಳಾಗಿ ಗೋಚರಿಸುತ್ತಿವೆ. ಅದರಲ್ಲೂ ಮಾರುಕಟ್ಟೆ ಹಾಗೂ ಕೊಳೆಗೇರಿ ಪ್ರದೇಶಗಳಲ್ಲಿ ಇವೆರಡೂ ಸಂಗತಿಗಳು ಪ್ರಭಾವ ಬೀರುವುದು ಖಚಿತ.

ವಾರ್ಡ್ ಸಂಖ್ಯೆ 61ರಿಂದ 68ರ ವ್ಯಾಪ್ತಿಯಲ್ಲಿ ಮಾರುಕಟ್ಟೆ ಹಾಗೂ ಸ್ಲಂಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಸ್ಟೇಶನ್ ರಸ್ತೆ, ಕೊಪ್ಪಿಕರ ರಸ್ತೆ, ದುರ್ಗದಬೈಲ್, ದಾಜಿಬಾನ ಪೇಟೆ, ಸಿಬಿಟಿ, ಷಾಹ ಬಜಾರ, ಜನತಾ ಬಜಾರ, ಮರಾಠ ಗಲ್ಲಿ- ಇವು ದಿನವಿಡೀ ಜನದಟ್ಟಣೆ ಇರುವ ಮಾರುಕಟ್ಟೆ ಪ್ರದೇಶಗಳು. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಾರಿಗೊಳಿಸಲಾದ ಲಾಕ್​ಡೌನ್​ನಿಂದ ವ್ಯಾಪಾರ - ವಹಿವಾಟು ಸಾಕಷ್ಟು ಹಿನ್ನಡೆ ಕಂಡಿದೆ. ಇದರ ನಡುವೆ ಹು-ಧಾ ಮಹಾನಗರ ಪಾಲಿಕೆಯು 2021-22ನೇ ಸಾಲಿಗೆ ಆಸ್ತಿ ತೆರಿಗೆ ದರದಲ್ಲಿ ವಿಪರೀತ ಏರಿಕೆ ಮಾಡಿದ್ದು ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. 2020-21ರಲ್ಲೂ ಏರಿಕೆ ಮಾಡಲಾಗಿತ್ತು.

ಆಸ್ತಿ ತೆರಿಗೆ ದರ ಏರಿಕೆಗೆ ವ್ಯಾಪಾರಿ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾದರೂ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಇಂದಿಗೂ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನಗಳು ಮುಂದುವರಿದಿವೆ. ಪಾಲಿಕೆ ಚುನಾವಣೆಯಲ್ಲಿ ಇದು ಚರ್ಚೆಯ ವಿಷಯವೂ ಹೌದು.

ಕುಡಿಯುವ ನೀರಿನ ಸಮಸ್ಯೆ:

ನಾಗರಿಕರಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪ, ಇತ್ಯಾದಿ ಮೂಲಸೌಕರ್ಯಗಳನ್ನು ಕಲ್ಪಿಸುವುದು ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಚುನಾಯಿತ ಪ್ರತಿನಿಧಿಗಳ ಮೊದಲ ಆದ್ಯತೆಯಾಗಬೇಕು. 61ನೇ ವಾರ್ಡ್​ನ ಘೊಷಿತ ಕೊಳೆಗೇರಿ (ಸ್ಲಂ) ಪ್ರದೇಶಗಳಾದ ಸುಡಗಾಡ ಚಾಳ, ಕನ್ಯಾನಗರ, ಮಂಟೂರ ಜೋಪಡಿ, ಮೌಲಾಲಿ ಜೋಪಡಿ, ಅರಳಿಕಟ್ಟಿ ಓಣಿ, ರಾಜಗೋಪಾಲನಗರ, ಕುಲಕರ್ಣಿ ಹಕ್ಕಲ ಪ್ರದೇಶಗಳಿಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯವಿಲ್ಲ. ಮನೆ ಮನೆಗೆ ನಲ್ಲಿ ಸಂಪರ್ಕ ದೂರವೇ ಉಳಿಯಿತು. ಬೇಡಿಕೆ ಇಟ್ಟಾಗ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಅದು ಸಹ ವಾರಕ್ಕೊಮ್ಮೆ ಎಂಬುದು ಸ್ಥಳೀಯರ ದೂರು.

1978ರಲ್ಲಿಯೇ ಕೆಲವು ಪ್ರದೇಶಗಳನ್ನು ಕೊಳೆಗೇರಿಯೆಂದು ಘೊಷಿಸಿದರೂ ಯಾರಿಗೂ ಹಕ್ಕುಪತ್ರ ಕೊಟ್ಟಿಲ್ಲ. ಇತ್ತೀಚೆಗೆ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕನ್ಯಾನಗರದ ನಿವಾಸಿಗಳಿಗೆ ಪರಿಚಯ ಪತ್ರ ನೀಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದೇ ವಾರ್ಡ್​ನ ಡೌನ್ ಚಾಳ, ಸಿಮೆಂಟ್ ಚಾಳ ಹಾಗೂ ವಿದ್ಯಾರಣ್ಯನಗರದ ಸುಮಾರು 3 ಸಾವಿರ ನಿವಾಸಿಗಳನ್ನು 12 ವರ್ಷಗಳ ಹಿಂದೆಯೇ ನೈಋತ್ಯ ರೈಲ್ವೆಯವರು ಅತಿಕ್ರಮಿತ ಪ್ರದೇಶವೆಂದು ತೆರವುಗೊಳಿಸಿದರೂ ಮತದಾರರ ಪಟ್ಟಿಯಲ್ಲಿ ಮಾತ್ರ ಇದೇ ಪ್ರದೇಶದಲ್ಲಿ ಉಳಿದುಕೊಂಡಿದ್ದಾರೆ.

ತಬೀಬಲ್ಯಾಂಡ್, ಗೂಡ್ಸ್ ಶೆಡ್ ರಸ್ತೆ, ಪಡದಯ್ಯನಹಕ್ಕಲ, ಇನ್ನಿತರ ಪ್ರದೇಶಗಳಲ್ಲಿ ರಸ್ತೆಗಳು ಸುಧಾರಣೆ ಕಾಣಬೇಕಿದೆ. ಕೊಪ್ಪಿಕರ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಂಡು 7-8 ತಿಂಗಳಾದರೂ ರಸ್ತೆ ದುರಸ್ತಿಯಾಗಿಲ್ಲ. ಜೆ.ಸಿ.ನಗರ, ಸ್ಟೇಶನ್ ರಸ್ತೆಯಲ್ಲಿ ಸ್ಮಾರ್ಟ್ ರೋಡ್ ಕಾಮಗಾರಿ ನಿಧಾನ ಗತಿಯಲ್ಲಿ ಸಾಗಿದೆ.

ತೀವ್ರ ಪೈಪೋಟಿ: ವಾರ್ಡ್ ನಂ. 61ರಿಂದ ಸ್ಪರ್ಧಿಸಲು ಅನೂಪ ಬಿಜವಾಡ ಬಿಜೆಪಿಯಿಂದ, ವಿಕ್ಕಿ ಗೋಣಿ ಆಪ್​ನಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಶ್ರೀಕಾಂತ ಶೇಲಗಾರ ಜೆಡಿಎಸ್ ಅಭ್ಯರ್ಥಿಯಾಗಿ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ಸಿನಿಂದ ರಾಜಾರಾಮ ಮಣಿಕುಂಟ್ಲ ಟಿಕೆಟ್ ಪಡೆದಿದ್ದಾರೆ.

62ರಿಂದ ಸ್ಪರ್ಧಿಸಲು ಭಾರತಿ ಯಲಕಾನ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಾಂಗ್ರೆಸ್ಸಿನಿಂದ ಸರತಾಜಬಾನು ಅಡ್ವಾನಿ ಸ್ಪರ್ಧಿಸಲಿದ್ದಾರೆ. 63ರಲ್ಲಿ ಕಾಂಗ್ರೆಸ್ ಟಿಕೆಟ್ ಮೊಹಮ್ಮದ್ ಇಲಿಯಾಸ್ ಮನಿಯಾರ ಪಾಲಾಗಿದೆ. ಇರ್ಷಾದ ಭದ್ರಾಪುರ ಅವರಿಗೆ ಜೆಡಿಎಸ್ ಹಾಗೂ ಮಲ್ಲಪ್ಪ ಶಿರಕೋಳ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. 64ರಲ್ಲಿ ಬಿಜೆಪಿಯಿಂದ ರುಕ್ಮಿಣಿ ಶೇಜವಾಡಕರ, ಜೆಡಿಎಸ್​ನಿಂದ ನಸೀಮಾ ಮಂಚಿನಕೊಪ್ಪ, ಕಾಂಗ್ರೆಸ್ಸಿನಿಂದ ಸುರೇಖಾ ಕುಲಕರ್ಣಿ ಸ್ಪರ್ಧಿಸಲಿದ್ದಾರೆ.

ವಾರ್ಡ್ ನಂ. 65ರಿಂದ ಸ್ಪರ್ಧಿಸಲು ಕಾಂಗ್ರೆಸ್​ನಿಂದ ಸವಿತಾ ಬುರಬುರೆ, ಬಿಜೆಪಿಯಿಂದ ಸುನಿತಾ ಜರತಾರಘರ, 66ರಲ್ಲಿ ಕಾಂಗ್ರೆಸ್ಸಿನಿಂದ ಅಶ್ವಿನಿ ಮೆಹರವಾಡೆ, ಬಿಜೆಪಿಯಿಂದ ಪ್ರೀತಿ ಲದವಾ ಹಾಗೂ 67ರಲ್ಲಿ ಕಾಂಗ್ರೆಸ್ಸಿನಿಂದ ರೋಹಿತ ದುಂಡರೆಡ್ಡಿ, ಬಿಜೆಪಿಯಿಂದ ಶಿವು ಮೆಣಸಿನಕಾಯಿ ಟಿಕೆಟ್ ಪಡೆದಿದ್ದಾರೆ. 67ರಲ್ಲಿ ರವಿ ಅರಳಿಕಟ್ಟಿಗೆ ಆಪ್ ಟಿಕೆಟ್ ನೀಡಿದೆ. ಈರನಗೌಡ ಪಾಟೀಲ ಜೆಡಿಎಸ್​ನಿಂದ ಸ್ಪರ್ಧಿಸಲಿದ್ದಾರೆ. 68ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಂಜನ ಹಿರೇಮಠ ಪಾಲಾಗಿದೆ. ಕುಮಾರೇಶ್ವರ ಹೊಂಗಲ ಅವರಿಗೆ ಜೆಡಿಎಸ್ ಟಿಕೆಟ್ ಘೊಷಣೆಯಾಗಿದೆ. ಬಿಜೆಪಿಯಿಂದ ಪ್ರಭು ನವಲಗುಂದಮಠ ಸ್ಪರ್ಧಿಸಲಿದ್ದಾರೆ.

ಹಲವು ವೈಶಿಷ್ಟ್ಯ

ಗದಗ ರಸ್ತೆಯಲ್ಲಿ ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ರೈಲ್ವೆ ಕಾರ್ಯಾಗಾರವಿದೆ. ಈ ಮಾರ್ಗದ ಒಂದು ಕಡೆ ಸಾಲು ಸಾಲು ರೈಲ್ವೆ ಕಚೇರಿಗಳು ಹಾಗೂ ಇನ್ನೊಂದು ಕಡೆ ಸಾಲು ಸಾಲು ರೈಲ್ವೆ ವಸತಿ ಸಂಕೀರ್ಣಗಳಿವೆ. ರಾಜ್ಯದ ಪ್ರಸಿದ್ಧ ಮೂರುಸಾವಿರ ಮಠ ಇಲ್ಲಿದೆ. ದುರ್ಗದಬೈಲ್, ಜವಳಿಸಾಲ, ಹಿರೇಪೇಟೆ, ಸಿಂಪಿ ಗಲ್ಲಿ, ಕೋಯಿನ್ ರಸ್ತೆ, ಸ್ಟೇಶನ್ ರಸ್ತೆ, ಇವು ನಿತ್ಯ ಕೋಟಿ ಕೋಟಿ ರೂಪಾಯಿ ವ್ಯವಹಾರ ಮಾಡುವ ವಾಣಿಜ್ಯ ಚಟುವಟಿಕೆಯ ಕೇಂದ್ರಗಳಾಗಿವೆ. ಕೊಪ್ಪಿಕರ ರಸ್ತೆ, ದುರ್ಗದಬೈಲ್, ದಾಜಿಬಾನಪೇಟೆ, ಮರಾಠ ಗಲ್ಲಿ, ಕಮರಿಪೇಟ ಹಲವು ದಶಕಗಳಿಂದ ಚಿರಪರಿಚಿತ ಸ್ಥಳಗಳು.

ಮತದಾರರ ವಿವರ

ವಾರ್ಡ್ ನಂ.----ಮತದಾರರು

61--10192

62--10340

63-- 9275

64-- 8344

65-- 9087

66-- 9016

67-- 8699

68-- 8713

ಕನ್ಯಾನಗರದಲ್ಲಿ 180ರಿಂದ 200 ಮನೆಗಳಿವೆ. ಕುಡಿಯುವ ನೀರಿನ ಸೌಲಭ್ಯವಿಲ್ಲ. ವಾರಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ನಿವಾಸಿಗಳು ಸಾಕಷ್ಟು ಹೋರಾಟ ಮಾಡಿದ ಬಳಿಕ 2016ರಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. 1978ರಲ್ಲಿ ಸ್ಲಂ ಎಂದು ಘೊಷಣೆಯಾದರೂ ರಸ್ತೆ, ಗಟಾರದಂಥ ಮೂಲಸೌಕರ್ಯಗಳಿಲ್ಲ.ವಿಜಯಕುಮಾರ ಕರ್ರಾ, ಕನ್ಯಾನಗರ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net