

ರಾಮನಗರ: ನಗರದ ರೇಷ್ಮೆ ಮಾರುಕಟ್ಟೆ ಸಮಸ್ಯೆಗಳ ಸುಳಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಒಂದಲ್ಲ ಒಂದು ವಿವಾದಗಳಿಂದ ಸುದ್ದಿ ಆಗುತ್ತಲೇ ಇದೆ. ಬೆಳಗ್ಗೆ ಹರಾಜು ನಡೆದರೂ ಸಂಜೆಯಾದರೂ ಗೂಡುಗಳನ್ನು ತುಂಬಿಕೊಳ್ಳದಿದ್ದಕ್ಕೆ ರೈತರು ಆಕ್ರೋಶ ಹೊರಹಾಕಿದ ಪ್ರಸಂಗ ಸೋಮವಾರ ನಡೆಯಿತು.
ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಸೋಮವಾರದಿಂದ ಆನ್‌ಲೈನ್ ವಹಿವಾಟು ಮತ್ತು ಪೇಮೆಂಟ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅಧಿಕಾರಿಗಳು ಮುಂದಾಗಿದ್ದರು. ಆದರೆ ಸರ್ವರ್ ಕೈಕೊಟ್ಟ ಕಾರಣದಿಂದಾಗಿ ಹಲವಾರು ರೈತರು ಸಂಜೆವರೆಗೂ ತಂದಿದ್ದ ಗೂಡು ಮಾರಾಟ ಮಾಡಲು ಕಾಯಬೇಕಾಯಿತು. ಆನ್‌ಲೈನ್ ಮೂಲಕ ಗೂಡು ಮಾರಾಟ ಮಾಡಿದ್ದರೂ, ಗೂಡು ಖರೀದಿ ಮಾಡದ ರೀಲರ್ ಯಾರೆಂಬುದನ್ನು ಪತ್ತೆ ಮಾಡಲು ಸಾಧ್ಯವಾಗದೇ ತೊಂದರೆಗೆ ಒಳಗಾದರು. ಇದರಿಂದ ಆಕ್ರೋಶಗೊಂಡ ರೈತರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಪ್ರತಿಭಟನೆಗೂ ಮುಂದಾದರು.
ರೀಲರ್ ಯಾರು ಅಂತಲೇ ಗೊತ್ತಿಲ್ಲ: ಸೋಮವಾರ ಆನ್‌ಲೈನ್ ಮೂಲಕವೇ ರೈತರ ಗೂಡು ಖರೀದಿ ನಡೆದಿದೆ. ಆದರೆ ಮಧ್ಯಾಹ್ನವಾದರೂ ರೈತರ ಬಳಿಗೆ ಬಂದು ಯಾರೂ ಗೂಡು ತೂಕ ಹಾಕಲು ಮುಂದಾಗಲೇ ಇಲ್ಲ. ಈ ಬಗ್ಗೆ ವಿಚಾರಿಸಲು ಹೋದರೆ ಗೂಡು ಖರೀದಿಸಿದ ರೀಲರ್ ಯಾರೆನ್ನುವುದನ್ನು ಪತ್ತೆಹಚ್ಚಲು ಮಾರುಕಟ್ಟೆ ಅಧಿಕಾರಿಗಳಿಗೆ ಸಾಧ್ಯವಾಗಲೇ ಇಲ್ಲ. ಇದರಿಂದ ಕೆರಳಿದ ರೈತರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ರೈತರನ್ನು ಸಮಾಧಾನಪಡಿಸಲು ಅಧಿಕಾರಿಗಳು ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಮಧ್ಯಪ್ರವೇಶಿಸಿದ ಪೊಲೀಸರು ರೈತರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.
ಆನ್‌ಲೈನ್ ವಹಿವಾಟು ಜಾರಿಗೆ ಮುಂದಾಗಿದ್ದರಿಂದ ಕೊಂಚ ಸಮಸ್ಯೆ: ಆನ್‌ಲೈನ್ ವಹಿವಾಟವನ್ನು ಸೋಮವಾರದಿಂದಲೇ ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದ್ದೆವು. ಈ ಹಿನ್ನೆಲೆಯಲ್ಲಿ ಮೊದಲ ದಿನ ಕೊಂಚ ಸಮಸ್ಯೆ ಆಗಿದೆ. ಸರ್ವರ್ ಕೈಕೊಟ್ಟ ಕಾರಣದಿಂದಾಗಿ ಕೆಲವು ರೈತರ ಗೂಡು ಖರೀದಿಯಲ್ಲಿ ಸಮಸ್ಯೆ ಆಗಿದೆ. ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗುತ್ತಿದೆ. ಮೊದಲ ದಿನದಲ್ಲಿ ಕೆಲವು ರೀಲರ್‌ಗಳಿಗೆ ಆ್ಲೈನ್ ಮೂಲಕವೂ ಗೂಡು ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಮುಂದಿನ ದಿನಗಳಲ್ಲಿ ಈ ರೀತಿ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ಅಧಿಕಾರಿಗಳು ಸೋಮವಾರದ ಘಟನೆಯನ್ನು ಸಮರ್ಥಿಸಿಕೊಂಡರು.
ಸಂಜೆಗೆ ಎಲ್ಲವೂ ಕ್ಲಿಯರ್: ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದುದನ್ನು ಅರಿತ ಅಧಿಕಾರಿಗಳು, ಆನ್‌ಲೈನ್ ಮೂಲಕ ಗೂಡು ಖರೀದಿ ಮಾಡಿದ್ದ ರೀಲರ್‌ಗಳನ್ನು ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾದರು. ಈ ವೇಳೆ ಮಾರುಕಟ್ಟೆಯಲ್ಲಿನ ಕೆಲವು ಅಧಿಕಾರಿಗಳೇ ರೀಲರ್‌ಗಳ ಹೆಸರನ್ನು ತಪ್ಪಾಗಿ ನಮೂದು ಮಾಡಿದ್ದರಿಂದ ಗೂಡು ಖರೀದಿ ವಿಳಂಬವಾಗಿರುವುದಕ್ಕೆ ಕಾರಣವಾಗಿದೆ. ಬೆಳಗ್ಗೆ 10.30ರ ಹೊತ್ತಿಗೆ ಹರಾಜಾಗಿದ್ದ ಗೂಡನ್ನು ಅಂತಿಮವಾಗಿ ಸಂಜೆ 5.30ರ ಸುಮಾರಿಗೆ ತೂಕ ಹಾಕಿಸಿ ರೀಲರ್‌ಗಳು ಖರೀದಿ ಮಾಡಿದರು.
ಅಧಿಕಾರಿಗಳ ತಪ್ಪಿನಿಂದಾಗಿ ನಾವು ತೊಂದರೆಗೆ ಒಳಗಾಗುವಂತೆ ಆಯಿತು. ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೂ ಕಾಯುವಂತೆ ಆಯಿತು, ಇದೇ ರೀತಿ ಆದರೆ ರೈತರಿಗೆ ತೊಂದರೆಯಾಗಲಿದೆ. ಮಹದೇವಯ್ಯ, ರೇಷ್ಮೆ ಬೆಳೆಗಾರ ಗುನ್ನೂರು ಆನ್‌ಲೈನ್ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗಿತ್ತು. ಈ ವೇಳೆ ಸರ್ವರ್ ಕೈಕೊಟ್ಟ ಕಾರಣದಿಂದಾಗಿ ಸಮಸ್ಯೆ ಉಂಟಾಯಿತು. ಇದರ ಹೊರತಾಗಿಯೂ ಸಮಸ್ಯೆ ಬಗೆಹರಿಸಲಾಗಿದೆ. ಶೇ.20 ಗೂಡು ಖರೀದಿಯಲ್ಲಿ ಮಾತ್ರ ಸಮಸ್ಯೆ ಆಗಿತ್ತು. ಮರೆಪ್ಪ ಬಿರಲದಿನ್ನಿ, ಉಪನಿರ್ದೇಶಕರು, ರೇಷ್ಮೆ ಮಾರುಕಟ್ಟೆ ರಾಮನಗರ