

ಭಟ್ಕಳ: ತಾಲೂಕಿನ ಸುಪ್ರಸಿದ್ಧ ಮಾರಿಯಮ್ಮನ ಜಾತ್ರೆ ಕರೊನಾ ಆತಂಕ ನಡುವೆಯೂ ಜು. 14 ಮತ್ತು 15 ರಂದು ಮಾರಿಗುಡಿಯಲ್ಲಿ ಎರಡು ದಿನ ಸರಳವಾಗಿ ನಡೆಯಲಿದೆ. ಕಳೆದ ವಾರ ಮಾರಿಯಮ್ಮನ ಮೂರ್ತಿ ತಯಾರಿಗಾಗಿ ವಿಧಿ- ವಿಧಾನಗಳ ಪ್ರಕಾರ ಚಾಲನೆ ನೀಡಲಾಗಿತ್ತು. ಮಾರಿಗುಡಿ ಸಮಿತಿ ಅಧ್ಯಕ್ಷ ಪರಮೇಶ್ವರ ಎಚ್. ನಾಯ್ಕ ಕೋಣೆಮನೆ, ಶ್ರೀಪಾದ ಕಂಚುಗಾರ, ರಘುವೀರ ಬಾಳಗಿ, ನರೇಂದ್ರ ನಾಯಕ, ಶ್ರೀಧರ ನಾಯ್ಕ ಮುಂದಾಳತ್ವ ಮಾರುತಿ ಅನಂತ ಆಚಾರ್ಯ ನೇತೃತ್ವದಲ್ಲಿ ಮೂರ್ತಿ ನಿರ್ಮಾಣ ಕಾರ್ಯ ಮುಗಿದಿದೆ. ಮಾರಿಯಮ್ಮನ ಆಕಾರ ಹೋಲುವ ಮೂರ್ತಿಗೆ ಮಂಗಳವಾರ ಬಣ್ಣ ಬಳಿದು ರಾತ್ರಿ ಅಲ್ಲಿಯೆ ಪ್ರಥಮ ಪೂಜೆ ನೆರವೇರಿಸಲಾಗುವುದು. ಬುಧವಾರ ಬೆಳಗಿನ ಜಾವ 4ಕ್ಕೆ ಮಾರಿಕಟ್ಟೆಯಲ್ಲಿರುವ ಮಾರಿಯಮ್ಮನ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುವುದು.
ಹಿನ್ನೆಲೆ: ಭಟ್ಕಳದಲ್ಲಿ ಹಿಂದಿನಿಂದ ಮಾರಿ ಜಾತ್ರೆಯು ಮಾರಿಕಟ್ಟೆಯಲ್ಲಿದ್ದ ಆಲದ ಮರದ ಬುಡದಲ್ಲಿ ಆಚರಿಸುತ್ತ ಬರಲಾಗುತ್ತಿತ್ತು. ಕಾಲಕ್ರಮೇಣ ಬದಲಾವಣೆ ಹೊಂದಿದರೂ ಮೂಲ ಉದ್ದೇಶಕ್ಕೆ ಧಕ್ಕೆ ಬಾರದಂತೆ ಮಾರಿ ಜಾತ್ರೆಯನ್ನು ನೂತನ ಮಾರಿಗುಡಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕರೊನಾ ಕಾರಣದಿಂದ ಸರಳವಾಗಿ ಆಚರಿಸಲಾಗುತ್ತಿದೆ. ಧಾರ್ವಿುಕ ವಿಧಿವಿಧಾನಗಳು ವಾಡಿಕೆಯಂತೆ ನೆರವೇರಲಿವೆ. ಭಕ್ತರಿಗೆ ಯಾವುದೆ ಸೇವೆ ನಡೆಸಲು ಅವಕಾಶವಿಲ್ಲ ಎಂದು ಆಡಳಿತ ಮಂಡಳಿ ಈಗಾಗಲೆ ಸ್ಪಷ್ಟಪಡಿಸಿದೆ.