ಮಾರಿಜಾತ್ರೆಯ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಸಂಪನ್ನ: ಅಖಾಡ ಬಳೆ ಗೆದ್ದ ಹರಿಯಾಣದ ಬಂಟಿ

WWWWWWWWWWWWWWW
Published on

ಸಾಗರ: ಶ್ರೀ ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ಜಾತ್ರಾ ಸಮಿತಿಯಿಂದ ಆಯೋಜಿಸಿದ್ದ ಹೊನಲು ಬೆಳಕಿನ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಸಂಪನ್ನಗೊಂಡಿತು.

ಭಾನುವಾರ ಕುಸ್ತಿ ಪಂದ್ಯಾವಳಿಯ ಕೊನೆಯ ದಿನದ ಹಿನ್ನೆಲೆಯಲ್ಲಿ ಹಾಗೂ ರಜಾ ದಿನ ಆಗಿದ್ದರಿಂದ ಸಾವಿರಾರು ಪ್ರೇಕ್ಷಕರು ಕುಸ್ತಿ ಪಂದ್ಯಾವಳಿ ವೀಕ್ಷಿಸಿದರು. ರೋಚಕ ಹಣಾಹಣಿಯಿಂದ ಕೂಡಿರುತ್ತಿದ್ದ ಪಂದ್ಯದ ವೇಳೆ ಜನರು ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು.

ದೆಹಲಿ, ಪಂಜಾಬ್‌ನಿಂದ ಆಗಮಿಸಿದ್ದ ಫೈಲ್ವಾನರು ಕುಸ್ತಿಯ ವಿವಿಧ ಪಟ್ಟು ಮತ್ತು ಕರಾಮತ್ತುಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ದಾವಣಗೆರೆ, ಶಿಕಾರಿಪುರ, ಭದ್ರಾವತಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಕುಸ್ತಿಪಟುಗಳು ಆಗಮಿಸಿದ್ದರು. ಶಿಕಾರಿಪುರ ತಾಲೂಕಿನ ಹೆಚ್ಚಿನ ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಪೈಪೋಟಿ ನೀಡಿದ್ದು ವಿಶೇಷ.

ಮೂರನೇ ದಿನ ಘಟಾನುಘಟಿ ಕುಸ್ತಿಪಟುಗಳ ಪಂದ್ಯಗಳು ನಡೆದವು. ರಾಜ್ಯ ಹಾಗೂ ಬೇರೆ ರಾಜ್ಯಗಳ ಕುಸ್ತಿಪಟುಗಳ ನಡುವಿನ ಪಂದ್ಯದಲ್ಲಿ ಸ್ಥಳೀಯ ಕುಸ್ತಿಪಟುಗಳು ವಿಜೇತರಾದ ಸಂದರ್ಭದಲ್ಲಿ ಪ್ರೇಕ್ಷಕರು ಸಂಭ್ರಮಿಸಿದರು.

ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಗಳಲ್ಲಿ ಗಮನ ಸೆಳೆದಿದ್ದ ಕುಸ್ತಿಪಟುಗಳು ಆಗಮಿಸಿದ್ದರು. ಮಹಾರಾಷ್ಟ್ರದ ರಾಮ್, ಹರಿಯಾಣದ ಬಂಟಿ, ತೇಜು ಮತ್ತಿತರರು ಆಗಮಿಸಿದ್ದರು. ನುರಿತ ತೀರ್ಪುಗಾರರು ಭಾಗವಹಿಸಿದ್ದರು. ಕುಸ್ತಿಪಟುಗಳಿಗೆ ಊಟ, ವಸತಿ ವ್ಯವಸ್ಥೆಯನ್ನು ಕುಸ್ತಿ ಸಮಿತಿಯು ಅಚ್ಚುಕಟ್ಟಾಗಿ ಮಾಡಿತ್ತು. ಕುಸ್ತಿ ಪಂದ್ಯಗಳಲ್ಲಿ ಗೆದ್ದ ಕುಸ್ತಿಪಟುಗಳಿಗೆ ಬೆಳ್ಳಿ ಪದಕ, ಬೆಳ್ಳಿ ಬಳೆ, ಬೆಳ್ಳಿಯ ಗದೆ ಸೇರಿ ವಿಶೇಷ ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ನೀಡಲಾಯಿತು. ಶ್ರೀ ಮಾರಿಕಾಂಬ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ನೇತೃತ್ವದಲ್ಲಿ ಪಂದ್ಯಗಳು ನಡೆಯಿತು.

ಅಖಾಡ ಬಳೆ ಗೆದ್ದ ಬಂಟಿ:  ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 150ಕ್ಕೂ ಹೆಚ್ಚು ಪಂದ್ಯಗಳು ನಡೆದಿದ್ದು 200ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದರು. 100ಕ್ಕೂ ಅಧಿಕ ಬೆಳ್ಳಿ ಪದಕಗಳನ್ನು ವಿಜೇತರಿಗೆ ನೀಡಲಾಯಿತು. ಕೊನೆಯ ಪಂದ್ಯದಲ್ಲಿ ಹರಿಯಾಣದ ಬಂಟಿ ವಿಜೇತರಾಗಿ ಅಖಾಡ ಬಳೆ ಗೆದ್ದರು. ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯ, ಅಂತರಾಜ್ಯದ ಕುಸ್ತಿಪಟುಗಳ ನಡುವಿನ ಪಂದ್ಯಗಳು ಗಮನ ಸೆಳೆದವು. ರಾಷ್ಟ್ರೀಯ ಕುಸ್ತಿಪಟು ಹರಿಯಾಣದ ಸಾಹಿಲ್ ಹಾಗೂ ಮೈಸೂರಿನ ಯಶವಂತ್ ಕಾಳಿಂಗ ನಡುವಿನ ಪಂದ್ಯದಲ್ಲಿ ಯಶವಂತ್ ವಿಜೇತರಾದರು. ಇವರಿಗೆ 90 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ವಿತರಿಸಲಾಯಿತು.

ಪಂಜಾಬ್ ಅಮೃತ್‌ಸರ್‌ನ ಕವಲ್‌ಜಿತ್‌ಸಿಂಗ್ ಹಾಗೂ ಕೊಲ್ಲಾಪುರದ ಹಸನ್ ಪಟೇಲ್ ನಡುವಿನ ರೋಚಕ ಹಣಾಹಣಿಯಲ್ಲಿ ಕವಲ್‌ಜಿತ್‌ಸಿಂಗ್ ಗೆದ್ದರು. ಕವಲ್‌ಜಿತ್‌ಸಿಂಗ್‌ಗೆ 1.10 ಲಕ್ಷ ರೂ. ನಗದು ಬಹುಮಾನ ನೀಡಿ ಪ್ರಶಸ್ತಿ ಪತ್ರ ವಿತರಿಸಲಾಯಿತು. ಪಂಜಾಬ್‌ನ ಮನ್‌ಪ್ರೀತ್‌ಸಿಂಗ್ ಹಾಗೂ ಕರ್ನಾಟಕದ ಜಮಖಂಡಿಯ ಶಿವಯ್ಯ ಪೂಜಾರಿ ನಡುವಿನ ಪಂದ್ಯದಲ್ಲಿ ಶಿವಯ್ಯ ಗೆಲುವು ಸಾಧಿಸಿ 1 ಲಕ್ಷ ರೂ. ನಗದು ಬಹುಮಾನ ತಮ್ಮದಾಗಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net