ಮಾರಿಕಾಂಬ ದೇಗುಲದಲ್ಲಿ ಮಂಡಲ ಪೂಜೆ

19 CRP 03
??????
Published on


ಹಾಸನ : ಚನ್ನರಾಯಪಟ್ಟಣ ತಾಲೂಕಿನ ದಿಡಗ ಹಳೇ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಮಾರಿಕಾಂಬ ದೇವಿ ಸನ್ನಿಧಿಯಲ್ಲಿ ಮಂಡಲ ಪೂಜೆಗೆ ಶನಿವಾರ ಚಾಲನೆ ನೀಡಲಾಯಿತು.
ಬುಧವಾರದಿಂದ ಶುಕ್ರವಾರದವರೆಗೆ 3 ದಿನಗಳ ಕಾಲ ದೇಗುಲದ ಉದ್ಘಾಟನಾ ಕಾರ್ಯಕ್ರಮ ಜರುಗಿದ್ದು ಶ್ರೀ ಮಾರಿಕಾಂಬ ದೇವಿಗೆ ಮಡಿಲಕ್ಕಿ ಸಮರ್ಪಿಸುವ ಮೂಲಕ 48 ದಿನಗಳ ಮಂಡಲ ಪೂಜೆ ಪ್ರಾರಂಭಿಸಲಾಯಿತು. ಈ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡಿದ್ದವು. ಮೊದಲಿಗೆ ವಿಘ್ನೇಶ್ವರ ಹಾಗೂ ಗಂಗಾಪೂಜೆ ಜರುಗಿತು. ಕುಂಕುಮಾರ್ಚನೆ, ಪುಷ್ಪಾರ್ಚನೆ ಬಳಿಕ ದೇವಿಯನ್ನು ಒಡವೆ-ವಸ್ತ್ರಗಳಿಂದ ಅಲಂಕರಿಸಿ ಮುತ್ತಿನಾರತಿ ಬೆಳಗಲಾಯಿತು.


ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು. ಹೆಣ್ಣು ಮಕ್ಕಳು ಆರತಿ ಬೆಳಗಿಸಿದರೆ ಭಕ್ತರು ಈಡುಗಾಯಿ ಹೊಡೆದರು. ಹಿರಿಯರು ಸೋಬಾನೆ ಪದ ಹಾಡಿದರೆ, ಕೆಂಚರಾಯ ಹಾಗೂ ಭೂತರಾಯ ಸೋಮಗಳ ಕುಣಿತ ಉತ್ಸವಕ್ಕೆ ಮೆರುಗು ನೀಡಿತು. ಉತ್ಸವದ ಬಳಿಕ ಶ್ರೀ ಮಾರಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಂಡಲ ಪೂಜೆಗೆ ಚಾಲನೆ ನೀಡಲಾಯಿತು. ಶನಿವಾರದಿಂದ 48 ದಿನಗಳ ಕಾಲ ದೇವಿಗೆ ದಿನನಿತ್ಯ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ನೈವೇದ್ಯ ಅರ್ಪಣೆ ಕೈಗೊಳ್ಳಲಾಗಿದೆ. 48 ನೇ ದಿನ ದೇಗುಲದ ಆವರಣದಲ್ಲಿ ಹೋಮ-ಹವನ ಹಾಗೂ ಅನ್ನದಾಸೋಹ ನೆರವೇರಲಿದೆ. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಿ.ಎಸ್.ತ್ಯಾಗರಾಜು, ಖಜಾಂಚಿ ಮಂಜೇಗೌಡ, ಗುಡಿಗೌಡ ಸುರೇಶ್, ಪಟೇಲ್ ತಮ್ಮಣ್ಣಗೌಡ, ಗವೀಶ್, ಡಿ.ಬಿ.ವೆಂಕಟೇಶ್, ಬಾಬು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net