ಮಾರಗೊಂಡನಹಳ್ಳಿ ಮಠದಲ್ಲಿ ಪುಸ್ತಕ ಮಂಥನ

24arsph3ep
Published on

ಅರಸೀಕೆರೆ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹಾಗೂ ತುಮಕೂರಿನ ಮಂಥನ ಬಳಗದ ವತಿಯಿಂದ ತಾಲೂಕಿನ ಜಾವಗಲ್ ಹೋಬಳಿ ಮಾರಗೊಂಡನಹಳ್ಳಿ ಮಠದಲ್ಲಿ ಇತ್ತೀಚೆಗೆ ಪುಸ್ತಕ ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಳಗದ ಸದಸ್ಯ ನಂಜೇಶ್ ಮಾತನಾಡಿ, ಬೆಳಗೆರೆ ಕೃಷ್ಣಶಾಸ್ತ್ರಿ ಬರೆದಿರುವ ಯೇಗ್ದಾಗೆಲ್ಲಾ ಐತೆ (ಯೋಗದಲ್ಲಿ ಎಲ್ಲವೂ ಇದೆ) ಕೃತಿಯಲ್ಲಿ ಶ್ರೀಮಠದ ಹಿರಿಯ ಜಗದ್ಗುರು ಶ್ರೀ ಮುಕೂಂದೂರು ಶ್ರೀಗಳ ಒಡನಾಟದಲ್ಲಿನ ಕ್ಷಣಗಳನ್ನು ಓದುಗರಿಗೆ ಅಕ್ಷರ ರೂಪದಲ್ಲಿ ಕೊಟ್ಟಿದ್ದಾರೆ. ತಾವು ಪವಾಡ ಪುರುಷರು ಎಂದು ಕರೆಯಿಸಿಕೊಳ್ಳಲು ಹಿಂಜರಿಯುತ್ತಿದ್ದ ಸ್ವಾಮೀಜಿ ಅಲೆಮಾರಿ ಭೈರಾಗಿಯಾಗಿಯೇ ಬದುಕು ಸಾಗಿಸಿದ್ದರಬೇಕು ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ವಿದ್ಯೆ, ಶಾಸ್ತ್ರದ ನೆರವಿಲ್ಲದೆಯೇ ಬದುಕಿನ ಚಿತ್ರಣವನ್ನು ಸರಳ ಗ್ರಾಮೀಣ ಶೈಲಿಯಲ್ಲಿಯೇ ಹೇಳುತ್ತಿದ್ದ ರೀತಿ ಅದ್ಭುತ ಎನ್ನುವ ಅಂಶಗಳು ಕೃತಿಯಲ್ಲಿ ದಾಖಲಾಗಿವೆ. ಆದ್ದರಿಂದಲೇ ಲಕ್ಷಾಂತರ ಪ್ರತಿಗಳು ಮಾರಾಟಗೊಂಡು ಕನ್ನಡ ಪುಸ್ತಕ ಲೋಕದಲ್ಲಿ ದಾಖಲೆ ಸೃಷಿಸಿದೆ ಎಂದು ಬಣ್ಣಿಸಿದರು.

ಮಂಥನ ಬಳಗದ ಗಣೇಶ್ ಪ್ರಸಾದ್, ಹೇಮಲತಾ, ಶ್ರೀವತ್ಸಾ, ವಿಜಯಲಕ್ಷ್ಮೀ, ಶಶಾಂಕ್, ಕೃತಿಯ ವಿವಿಧ ಅಧ್ಯಾಯಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ವಿನೀತ್ ಕುಮಾರ್, ಚಂದನ್ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net