

ವಾಡಿ: ಇಲ್ಲಿಗೆ ಸಮೀಪದ ಯರಗಲ್ ಕ್ರಾಸ್ ಬಳಿ ಸೋಮವಾರ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಚಿನ್ನಾಭರಣ ವ್ಯಾಪಾರಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕಲಬುರಗಿ ಗಾಜಿಪುರ ಬಡಾವಣೆಯ ನಿವಾಸಿಯಾಗಿದ್ದ ಮಂಜುನಾಥ ತೆಗನೂರ (೪೦) ಕೊಲೆಯಾದವರು. ಕಲಬುರಗಿಯಲ್ಲಿ ಚಿನ್ನದ ವ್ಯಾಪಾರ ಮಾಡಿಕೊಂಡಿದ್ದರು. ಅಲ್ಲದೆ ವಕೀಲ ವೃತ್ತಿ ಮಾಡುತ್ತಿದ್ದರು.
ಕೊಲೆಗೆ ಆಸ್ತಿ ವಿವಾದ ಇಲ್ಲವೇ ಹಳೆಯ ವೈಷಮ್ಯವೇ ಕಾರಣವಿರುವಹುದು ಎಂಬ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ತಲೆ ಮತ್ತು ಮುಖದ ಮೇಲೆ ಸೈಜುಗಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ. ಮಂಜುನಾಥ ಅವರಿಗೆ ರಾವೂರದಲ್ಲಿ ಸಾಕಷ್ಟು ಆಸ್ತಿ ಇದೆ ಎನ್ನಲಾಗಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಪಿಎಸ್‌ಐ ವಿಜಯಕುಮಾರ ಬಾವಗಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.