ಮಾರಕ ರೋಗಗಳ ತಡೆಗೆ ಲಸಿಕೆ ಅಗತ್ಯ

CTD 07 INDRA DANUSH (1)--05
Published on


ಚಿತ್ರದುರ್ಗ: ಲಸಿಕೆಯಿಂದ ವಂಚಿತರಾಗಿರುವ ಮಕ್ಕಳು ಹಾಗೂ ಗರ್ಭಿಣಿಯರಿಗೆ ಪರಿಣಾಮಕಾರಿ ಇಂದ್ರಧನುಷ್ ಲಸಿಕಾ ಅಭಿಯಾನ-5.0 ರಡಿ ಲಸಿಕೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಇಲಾಖೆ ಆಯೋಜಿಸಿದ್ದ ಲಸಿಕಾ ಅಭಿಯಾನಕ್ಕೆ ಬುದ್ಧನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಈ ಅಭಿಯಾನದ ವೇಳೆ ಮೂರು ಹಂತಗಳಲ್ಲಿ ಲಸಿಕೆ ನೀಡಲಾಗುತ್ತದೆ. ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಲಸಿಕೆ ಹಾಕಿಸಬೇಕು. ಮಾರಕ ರೋಗಗಳ ತಡೆಗೆ ಲಸಿಕೆಗಳ ಅಗತ್ಯವಿದೆ ಎಂದರು.
ಆಶಾ ಕಾರ್ಯಕರ್ತೆಯರು ಮನೆ, ಮನೆಗೆ ತೆರಳಿ ಸರ್ವೇ ಮಾಡಿದ್ದಾರೆ. ವಿವಿಧ ಲಸಿಕೆಗಳಿಂದ ಹೊರಗುಳಿದಿರುವ ಗರ್ಭಿಣಿಯರ ಸಂಖ್ಯೆ 900, 2 ವರ್ಷದೊಳಗಿನ ಮಕ್ಕಳ ಸಂಖ್ಯೆ 3418 ಹಾಗೂ 2ರಿಂದ 5 ವರ್ಷದ ಮಕ್ಕಳ ಸಂಖ್ಯೆ 57 ಇದೆ. ಈ ಎಲ್ಲರಿಗೂ ಲಸಿಕೆ ನೀಡುವ ಗುರಿ ಇದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯಧಿಕಾರಿ ಡಾ.ಆರ್.ರಂಗನಾಥ್ ಮಾತನಾಡಿ, ಲಸಿಕೆ ನೀಡಿದ ನಂತರ ಮಾಹಿತಿಯನ್ನು ಯು-ವಿನ್ ಪೋರ್ಟಲ್‌ನಲ್ಲಿ ಫಲಾನುಭವಿಗಳ ಮಾಹಿತಿಯನ್ನು ಎಂಟ್ರಿ ಮಾಡಲಾಗುವುದು ಎಂದರು.
ನಗರಸಭೆ ಮಾಜಿ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ರೇಣುಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ತಾಲೂಕು ನೋಡಲ್ ಅಧಿಕಾರಿ ಸುಧಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net