ಮಾನಸಿಕ ಸ್ಥೈರ್ಯ ಒಂದು ರೋಗ ನಿರೋಧಕ ಶಕ್ತಿ

ಮಾನಸಿಕ ಸ್ಥೈರ್ಯ ಒಂದು ರೋಗ ನಿರೋಧಕ ಶಕ್ತಿ
Published on


ಚನ್ನರಾಯಪಟ್ಟಣ: ಹೆಚ್‌ಐವಿ ಸೋಂಕಿತರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವಾದಲ್ಲಿ ಅವರು ಹೆಚ್ಚು ಕಾಲ ಬದುಕುಳಿಯಲು ಸಾಧ್ಯವಾಗುತ್ತದೆ ಎಂದು ಚನ್ನರಾಯಪಟ್ಟಣ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಸಿ.ದೀಪು ಹೇಳಿದರು.


ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರ್ರೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಲಯನ್ಸ್ ಕ್ಲಬ್ ನಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದಕುವ ಹಕ್ಕಿದೆ. ಹೆಚ್‌ಐವಿ ಸೋಂಕಿತರಿಗೆ ಎಲ್ಲ ರೀತಿಯ ಗೌರವ, ಮಾನ್ಯತೆ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಎಲ್ಲರಂತೆ ಬದುಕಲು ಬಿಡಬೇಕು ಎಂದು ತಿಳಿಸಿದರು.


ತಪ್ಪು ಮಾಡಿದವರಿಗೆ ಸೋಂಕು ಬರುತ್ತದೆ. ಅವರನ್ನು ಸಮಾಜದಿಂದ ಬಹಿಷ್ಕಾರ ಮಾಡಬೇಕು, ಅವರೊಂದಿಗಿದ್ದರೇ ಸೋಂಕು ನಮ್ಮಗಳಿಗೂ ಹರಡುತ್ತದೆ ಎಂಬ ತಪ್ಪು ಕಲ್ಪನೆ ಇದೆ. ನಾಗರೀಕ ಸಮಾಜ ಇವುಗಳಿಗೆ ಆಸ್ಪದ ನೀಡದೇ ಅವರ ಮನೋಸ್ಥೈಯ ಹೆಚ್ಚಿಸುವ ನಿಟ್ಟಿನಲ್ಲಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕ ಕೆಂಚೇಗೌಡ ಮಾತನಾಡಿ, 32ವರ್ಷಗಳ ಹಿಂದೆ ದೇಶದಲ್ಲಿ ಕಂಡುಬಂದ ಸೋಂಕು 24 ಲಕ್ಷ ಜನರನ್ನು ಬಾಧಿಸುತ್ತಿದೆ. ಜಿಲ್ಲೆಯಲ್ಲಿ 10 ಸಾವಿರ ಮಂದಿ ಎಆರ್‌ಟಿ ಕೇಂದ್ರದಲ್ಲಿ ಸೋಂಕು ಇರುವುದಾಗಿ ನೊಂದಾವಣೆಯಾಗಿದ್ದಾರೆ ಎಂದರು.


2 ಸಾವಿರ ಸೋಂಕಿತರನ್ನು ಹೊಂದುವ ಮೂಲಕ ತಾಲೂಕು ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿದೆ. ಅರಿವು ಇಲ್ಲದಿರುವುದೇ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ತಾಲೂಕಿನ ಐಸಿಟಿಸಿ ಕೇಂದ್ರದಲ್ಲಿ ಪರೀಕ್ಷೆಗೊಳಪಟ್ಟ ರೋಗಿಯ ಮಾಹಿತಿಯನ್ನು ಗೌಪ್ಯವಾಗಿಟ್ಟು, ಉಚಿತವಾಗಿ ಚಿಕಿತ್ಸೆ ನೀಡಲಾಗುವುದು, ನಿಯಮಿತ ಚಿಕಿತ್ಸೆಯಿಂದ ರೋಗಿ ಹೆಚ್ಚು ಕಾಲ ಬದುಕುಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.


ಟಿಎಚ್‌ಓ ಡಾ.ಕಿಶೋರ್‌ಕುಮಾರ್, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಕುಮಾರಸ್ವಾಮಿ, ಕಾರ್ಯದರ್ಶಿ ವಿಶ್ವನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ರವಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net