ಮಾನಸಿಕ ಸ್ಥಿರತೆ ಕಳೆದುಕೊಂಡಿರುವ ಸಿಎಂ

IMG-20250120-WA0005
Published on

ಚಾಮರಾಜನಗರ: ರಾಜ್ಯದಲ್ಲಿ ಮಿತಿಮೀರಿದ ಭ್ರಷ್ಟಚಾರ, ಹಳ್ಳ ಹಿಡಿದ ಕಾನೂನು ಸುವ್ಯವಸ್ಥೆ, ನಿರಂತರ ಬೆಲೆಯೇರಿಕೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಚರ್ಚೆ, ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಒಡಕಿನ ನಡುವೆ ಗಂಭೀರವಾದ ಮುಡಾ ಪ್ರಕರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಿದ್ದು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಆಗ್ರಹಿಸಿದರು.

ಬಹುಕೋಟಿ ಮುಡಾ ಹಗರಣದ ಬಗ್ಗೆ ಬಿಜೆಪಿ ಪಾದಯಾತ್ರೆ ಮಾಡಿದ್ದನ್ನು ಕಾಂಗ್ರೆಸ್‌ನವರು ಟೀಕಿಸಿದ್ದರು. ಆದರೇ ಸಿಎಂ ಸಿದ್ದರಾಮಯ್ಯ ನ್ಯಾಯಾಲಯದ ಆದೇಶವನ್ನೇ ತಿರಸ್ಕರಿಸಿ ಆತ್ಮ ಸಾಕ್ಷಿಯ ಮೊರೆ ಹೋಗಿದ್ದರು. ಸದ್ಯಕ್ಕೆ 300 ಕೋಟಿ ರೂ, ಅಧಿಕವಾದ 142 ಸ್ಥಿರಾಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು. ಅದು ಈಗ 631 ನಿವೇಶನಗಳ ದಾಖಲೆ ಕೇಳಿದ್ದು, 5000 ಕೋಟಿ ರೂ, ಗಿಂತಲೂ ಹೆಚ್ಚು ಆಸ್ತಿ ದುರುಪಯೋಗವಾಗಿರಬಹುದು ಎಂದು ಅಂದಾಜಿಸಲಾಗಿದೆ. ಹಗರಣದಲ್ಲಿ ಭಾಗಿಯಾಗಿರುವವರಿಗೆ ಬಂಧನದ ಭೀತಿ ಶುರುವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಿ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ರಾಜ್ಯದ ಲೋಕಾಯುಕ್ತ ಪೊಲೀಸರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ 1998 ರ ಕಾಯ್ದೆಯ ಅಡಿಯಲ್ಲಿ ಎಫ್.ಐ.ಆರ್ ದಾಖಲು ಮಾಡಿದೆ. ಅದರ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿದೆ. ಬಡವರಿಗೆ ನೀಡಬೇಕಾದ ನಿವೇಶನಗಳು ಸಿರಿವಂತರು ಹಾಗೂ ರಾಜಕಾರಣಿಗಳ ವಶವಾಗಿದೆ. ಇದೊಂದು ಗಂಭಿರವಾದ ಪ್ರಕರಣವಾಗಿದ್ದು, ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದೆ ಗೂಂಡಾ ಮಾದರಿಯನ್ನು ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನಗಳಿಂದಲೂ ರಾಜ್ಯದಲ್ಲಿ ನಿರಂತರವಾಗಿ ಬೆಲೆ ಏರಿಕೆ, ಭ್ರಷ್ಟಚಾರ ತಾಂಡವವಾಡುತ್ತಿದ್ದು, ಆಡಳಿತ ವ್ಯವಸ್ಥೆ ಹಳ್ಳ ಹಿಡಿದಿದೆ. ಇತ್ತೀಚೆಗೆ ಬೀದರ್ ಮತ್ತು ಮಂಗಳೂರಿನಲ್ಲಿ ನಡೆದ ಕಳ್ಳತನ ಹಾಗೂ ಕೊಲೆ ಪ್ರಕರಣಗಳು, ಹಸುವಿನ ಕೆಚ್ಚಲು ಕೂಯ್ದ ಪ್ರಕರಣ ರಾಜ್ಯದಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದನ್ನು ತೋರಿಸುತ್ತದೆ. ರಾಜ್ಯದಲ್ಲಿ ಜನಗಳ ಜತೆಗೆ ದನಗಳಿಗೂ ರಕ್ಷಣೆ ಇಲ್ಲದಂತಾಗಿದೆ. ರಾಜ್ಯ ಲೂಟಿಕೋರರಿಗೆ ಆಶ್ರಯ ತಾಣವಾಗುತ್ತಿದೆ. ಈ ನಡುವೆ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಆಂತರಿಕ ಗೊಂದಲಗಳಿಂದ ಸಿಎಂ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಿದ್ದಾರೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ,ಮಾನಸಿಕ ಸ್ಥಿರತೆ ಇರುವವರು ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಡಬೇಕು. ಈ ಮೂಲಕ ರಾಜ್ಯವನ್ನು ಉಳಿಸಬೇಕು ಎಂದು ಹೇಳಿದರು.

ಗೋಷ್ಠಿಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್ ಹಾಜರಿದ್ದರು.

ಅಂಬೇಡ್ಕರ್ ವಿರೋಧಿ ಕಾಂಗ್ರೆಸ್:

ಕಾಂಗ್ರೆಸ್‌ನ ದಲಿತ ಶಾಸಕ ನರೇಂದ್ರಸ್ವಾಮಿ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸಂವಿಧಾನ ನಡೆಯುತ್ತದೇ ಎನ್ನುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು, ಕಾಂಗ್ರೆಸ್ ನಿಜವಾಗಿಯೂ ಅಂಬೇಡ್ಕರ್ ವಿರೋಧಿಯಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಿ.ವೃಷಭೇಂದ್ರಪ್ಪ ಆರೋಪಿಸಿದರು. ಅಂಬೇಡ್ಕರ್ ಅವರು ಬದುಕಿದ್ದಾಗ ಮತ್ತು ಅವರು ಸತ್ತ ನಂತರವೂ ಗೌರವಯುತವಾಗಿ ನಡೆಸಿಕೊಳ್ಳದ ಕಾಂಗ್ರೆಸ್ ಕೇವಲ ಓಟಿಗಾಗಿ ಅಂಬೇಡ್ಕರ್ ಸ್ಮರಣೆ ಮಾಡುತ್ತಾರೆ. ಈ ಮೂಲಕ ದಲಿತ ಸಮುದಾಯವನ್ನು ವಂಚಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ದಲಿತ, ಸಂವಿಧಾನ ಮತ್ತು ಅಂಬೇಡ್ಕರ್ ವಿರೋಧಿಯ ನಡೆಯನ್ನು ದಲಿತರು ಅರಿತುಕೊಳ್ಳಬೇಕಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net