ಮಾನಸಿಕ ನೆಮ್ಮದಿಗೆ ಸಂಗೀತ ಕಲಿಯಿರಿ

9BK4
ಬಸವಕಲ್ಯಾಣದ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಗಾನಯೋಗಿ ಪಂಡಿತ ಡಾ.ಪುಟ್ಟರಾಜ ಗವಾಯಿಗಳ ೧೧೧ನೇ ಜಯಂತ್ಯುತ್ಸವ ನಿಮಿತ್ತ ಆಯೋಜಿಸಿದ್ದ ಸಂಗೀತ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಬಸವರಾಜ ವರವಟ್ಟೆ, ಗಿರೀಶ ತಾಂಬೋಳೆ, ಹರಿಶ್ಚಂದ್ರ ಪಾಂಚಾಳ, ಜಗದೀಶ ನಗನೂರು, ರಾಜಕುಮಾರ ಹೂಗಾರ, ರಮೇಶ ಗರುಡಕರ್, ಶಾಂತಯ್ಯ ಹಿರೇಮಠ, ಧೂಳಪ್ಪ ಮುಡಬಿ ಇದ್ದರು.
Published on

ಬಸವಕಲ್ಯಾಣ: ಜೀವನದಲ್ಲಿ ಶಾಂತಿ, ನೆಮ್ಮದಿ ನೀಡುವ ಶಕ್ತಿ ಸಂಗೀತಕ್ಕಿದೆ. ಮಾನಸಿಕ ನೆಮ್ಮದಿ ಬೇಕಾದರೆ ಸಂಗೀತ ಕಲಿಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಬಸವರಾಜ ವರವಟ್ಟೆ ಹೇಳಿದರು.

ನಗರದ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಗಾನಯೋಗಿ ಪಂಡಿತ ಡಾ.ಪುಟ್ಟರಾಜ ಗವಾಯಿಗಳ ೧೧೧ನೇ ಜಯಂತ್ಯುತ್ಸವ ನಿಮಿತ್ತ ಸಂಗೀತ ಕಲಾ ಬಳಗದಿಂದ ಭಾನುವಾರ ಆಯೋಜಿಸಿದ್ದ ಸಂಗೀತ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಸಂಗೀತಾಸಕ್ತಿ ಬೆಳೆಸಬೇಕಾದ ಅವಶ್ಯಕತೆ ಇದ್ದು, ಇದಕ್ಕೆ ಇಂಥ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಕಲೆ ಮತ್ತು ಕಲಾವಿದರನ್ನು ಬೆಳೆಸುವ, ಪ್ರೋತ್ಸಾಹಿಸುವ ಕೆಲಸ ಸಮಾಜದಿಂದ ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಸಿದ ಯುವ ಮುಖಂಡ ಗಿರೀಶ ತಾಂಬೋಳೆ ಮಾತನಾಡಿ, ಸಂಗೀತ ಕ್ಷೇತ್ರಕ್ಕೆ ಹಾಗೂ ನಾಡಿಗೆ ಡಾ.ಪುಟ್ಟರಾಜ ಗವಾಯಿಗಳು ನೀಡಿದ ಕೊಡುಗೆ ದೊಡ್ಡದು. ನೂರಾರು ಜನ ಅಂಧ, ಅನಾಥ ಮಕ್ಕಳ ಬಾಳಿಗೆ ಬೆಳಕು ತೋರಿದ ಮಹಾಚೇತನರು. ಪ್ರತಿವರ್ಷ ಕಾರ್ಯಕ್ರಮ ನಡೆಸಲು ಎಲ್ಲ ರೀತಿಯ ಸಹಕಾರ ಮತ್ತು ಸಹಾಯ ನೀಡುತ್ತೇನೆ ಎಂದು ಭರವಸೆ ನೀಡಿದರು.

ವಿಶ್ವಕರ್ಮ ಸಮಾಜದ ಹಿರಿಯ ಮುಖಂಡ ಹರಿಶ್ಚಂದ್ರ ಪಾಂಚಾಳ ಅಧ್ಯಕ್ಷತೆ ವಹಿಸಿದ್ದರು. ಶರಣಬಸವೇಶ್ವರ ಬಿಇಡಿ ಪ್ರಾಚಾರ್ಯ ರಾಚಯ್ಯ ಮಠಪತಿ. ಗುಡಗುರ್ತಿ ಮೊರಾರ್ಜಿ ವಸತಿ ಶಾಲೆ ಸಂಗೀತ ಶಿಕ್ಷಕ ಜಗದೀಶ ಶರಣರು ನಗನೂರು, ಹಿರಿಯ ಕಲಾವಿದ ಧೂಳಪ್ಪ ಮುಡಬಿ, ಕಲಾವಿದ ಪ್ರಫುಲ್‌ಕುಮಾರ ಗಾಯಕವಾಡ ಇದ್ದರು.

ಹಿರಿಯ ಸಂಗೀತ ಕಲಾವಿದ ರಾಜಕುಮಾರ ಹೂಗಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿವರಾಜ ಖೇಲೆ ವಂದಿಸಿದರು. ಶಾಂತಯ್ಯ ಮಠಪತಿ ನಿರೂಪಣೆ ಮಾಡಿದರು. ಸಂಗೀತ ಶಾಲೆಯ ಮಕ್ಕಳು ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.

ಭಾವಗೀತೆಗಳ ಮೆರುಗು: ಹಿರಿಯ ಸಂಗೀತ ಕಲಾವಿದ ಜಗದೀಶ ನಗನೂರು ಮತ್ತು ಯುವ ಕಲಾವಿದೆ ಪ್ರಗತಿ ಎಸ್.ಹಿರೇಮಠ ಅವರು ಸುಮಧುರ ಕಂಠದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ನಡೆಸಿಕೊಟ್ಟರು. ಸಂಗೀತ ಕಲಾವಿದರು ಸಂಗೀತ, ವಚನ ಗಾಯನ, ಭಕ್ತಿ ಗೀತೆ, ಭಾವಗೀತೆಗಳನ್ನು ಹಾಡಿ ಸಮ್ಮೇಳನಕ್ಕೆ ಮೆರುಗು ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net