ಮಾನಸಿಕ ನೆಮ್ಮದಿಗೆ ಸಂಗೀತ ಅಗತ್ಯ

24 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತ ಎಲ್ಲರೂ ಮೆಚ್ಚುವ ಕಲೆ. ಸಂಗೀತ ಕಲಿಕೆಯನ್ನು ಸ್ಪರ್ಧೆಗೆ ಕಲಿಸುವುದು ಬೇಡ, ಮಾನಸಿಕ ನೆಮ್ಮದಿಗೆ ಸಂಗೀತ ಅವಶ್ಯಕ. ನಮ್ಮ ಹುಟ್ಟಿನಿಂದ ಅಂತ್ಯದವರೆಗೂ ಸಂಗೀತ ನಮ್ಮೊಂದಿಗೆ ಇರುತ್ತದೆ ಎಂದು ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಅಭಿಪ್ರಾಯಪಟ್ಟರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ದರ್ಬಾರ ಸಂಗೀತ ಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ವರ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯದಲ್ಲಿನ ಪದ್ಯಗಳನ್ನು ಸ್ವರ ಸಂಯೋಜನೆ ಮಾಡಿ ರೂಢಿಸಿಕೊಂಡಾಗ ಅದು ನಮಗೆ ಇಂದಿಗೂ ನೆನಪುಳಿಯಲು ಸಾಧ್ಯ. ಅನ್ನ, ಅರಿವು ಮತ್ತು ಸಾಮರ್ಥ್ಯ ಕೊಡಬಲ್ಲ ಶಕ್ತಿ ಸಂಗೀತಕ್ಕಿದೆ. ವಿದ್ಯಾರ್ಥಿಗಳು ಅನುಕರಣೆ ಮಾಡದೆ ತಮ್ಮದೇ ಆದ ಸ್ವಂತಿಕೆ ರೂಢಿಸಿಕೊಳ್ಳುವುದನ್ನು ಕಲಿಯಬೇಕು ಎಂದರು.
ಹುಬ್ಬಳ್ಳಿ ಆರ್ಯನ್ಸ್ ಪಬ್ಲಿಕ್ ಶಾಲೆ ಪ್ರಾಚಾರ್ಯ ಶಿರಿಷಾ ಎಲಿಜಬೆಲ್ ಮಾತನಾಡಿ, ಭಾರತೀಯ ಸಂಸ್ಕೃತಿ ಅತ್ಯಂತ ಶ್ರೀಮಂತ ಸಂಸ್ಕೃತಿ. ಆ ನಿಟ್ಟಿನಲ್ಲಿ ಭಾರತೀಯ ಸಂಸ್ಕೃತಿಗೆ ಧಾರವಾಡವು ಅನೇಕ ಸಂಗೀತ ದಿಗ್ಗಜರನ್ನು ನೀಡಿ ಬಹುದೊಡ್ಡ ಕೊಡುಗೆ ಕೊಟ್ಟಿದೆ. ದರ್ಬಾರ ಸಂಗೀತ ಕಲಾ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಗಾಯಕ ಪಂ. ಸೋಮನಾಥ ಮರಡೂರ ಮಾತನಾಡಿ, ದೇಶದ ಕಲೆಗಳಾದ ಸಂಗೀತ, ನೃತ್ಯ ಮತ್ತು ನಾಟಕಗಳು ಮನುಷ್ಯನ ಜೀವನದಲ್ಲಿ ನಡೆಯುವ ದುಃಖ ದುಮ್ಮಾನಗಳನ್ನು ಶಮನಗೊಳಿಸುವ ಗುಣ ಹೊಂದಿವೆ. ಇವನ್ನು ಏಕಾಗ್ರತೆ, ಶ್ರದ್ಧೆ ಮತ್ತು ಪರಿಶ್ರಮದಿಂದ ಕಲಿತಾದ ಪರಿಪೂರ್ಣತೆ ಹೊಂದಿಬಹುದು ಎಂದರು.
ಪ್ರಕಾಶ ಬಾಳಿಕಾಯಿ, ಇತರರು ಇದ್ದರು. ನಂತರ ಹಫೀಜಖಾನ್ ಮತ್ತು ಹಾರೀಸಖಾನ್ ದ್ವಂದ್ವ ಸಿತಾರ ವಾದನ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಉಸ್ತಾದ್ ನಿಸಾರ್ ಅಹಮ್ಮದ ಸಾಥ್ ನೀಡಿದರು. ಶ್ರೀಧರ ಭಜಂತ್ರಿ ಶಹನಾಯಿ, ದರ್ಬಾರ ಸಂಗೀತ ಕಲಾ ಸಂಸ್ಥೆ ವಿದ್ಯಾರ್ಥಿಗಳಿಂದ ಗಾಯನ ನಡೆಯಿತು. ತಬಲಾದಲ್ಲಿ ಡಾ.ರಾಜಕುಮಾರ ಮುಡಬಿ, ತುಕಾರಾಮ ಮಡಿವಾಳರ, ಕಲ್ಮೇಶ ಬನದನೂಲಮಠ, ಹಾರ್ಮೋನಿಯಂದಲ್ಲಿ ಸೋಹಿಲ್ ಸಯ್ಯದ ಸಾಥ್ ನೀಡಿದರು.
ಬಸವರಾಜ ಹೂಗಾರ ಸ್ವಾಗತಿಸಿದರು. ಸುಹಾಸಿನಿ ಕುಕಡೊಳ್ಳಿ ನಿರೂಪಿಸಿದರು. ಡಾ.ರಾಜಕುಮಾರ ಮುಡಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net