ಮಾನಸಿಕ ಕಾಯಿಲೆಗೆ ಸೂಕ್ತ ಔಷಧೋಪಚಾರ ಅಗತ್ಯ

HUN-JULY-20-4{DHARMASTHALA PROGRAMME}
Published on

ಹುಣಸೂರು: ಮಾನಸಿಕ ಕಾಯಿಲೆ ಗುಣಪಡಿಸಿಬಹುದಾದ ಕಾಯಿಲೆ ಆಗಿದ್ದು, ಸೂಕ್ತ ಔಷಧೋಪಚಾರ ಪಡೆದು ಗುಣಮುಖರಾಗಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ತಿಳಿಸಿದರು.


ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಎಇಡಿ ಸಹಯೋಗದಲ್ಲಿ ನಗರದ ಎಚ್.ಡಿ.ಕೋಟೆ ವೃತ್ತದಲ್ಲಿ ಗುರುವಾರ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.


ಮಾನಸಿಕ ಕಾಯಿಲೆ ಎನ್ನುವುದು ಮಿದುಳಿನ ತೊಂದರೆ. ಇಂತಹ ತೊಂದರೆಗಳಿಂದ ಬಳಲುತ್ತಿರುವ ವ್ಯಕ್ತಿಯ ಆಲೋಚನೆಗಳು ಮತ್ತು ಭಾವನೆಗಳಲ್ಲಿ ಏರುಪೇರು, ವಿಚಿತ್ರ ಅನುಭವಗಳು, ಅತಿಯಾದ ದುಃಖ, ಅತಿಯಾದ ಸಂತೋಷ ಮುಂತಾದ ವೈಪರೀತ್ಯ ಕಾಣಬಹುದು. ಇದು ಭೂತಪ್ರೇತಗಳ ಕಾಟ, ಸಾಮಾನ್ಯ ವ್ಯಕ್ತಿಗೆ ಈ ಕಾಯಿಲೆ ಬರುವುದಿಲ್ಲ, ಔಷಧೋಪಚಾರ ಇಲ್ಲ ಎಂಬಂತಹ ತಪ್ಪು ಕಲ್ಪನೆಗಳು ಜನಸಾಮಾನ್ಯರಲ್ಲಿದೆ. ಆದರೆ ಮಾನಸಿಕ ಕಾಯಿಲೆಯನ್ನು ಸೂಕ್ತ ಔಷಧೋಪಚಾರಗಳಿಂದ ಗುಣಪಡಿಸಬಹುದು ಎಂದರು.


ತಾಲೂಕಿನಲ್ಲಿ ಈಗಾಗಲೇ ಆರೋಗ್ಯ ಕಾರ್ಯಕರ್ತರು ಸರ್ವೇ ಮಾಡಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಿದ್ದಾರೆ. ಮಾನಸಿಕ ಕಾಯಿಲೆ ಚಿಕಿತ್ಸೆಗಾಗಿ ಈ ಹಿಂದೆ ಮೈಸೂರು, ಬೆಂಗಳೂರು ನಗರಪ್ರದೇಶದ ಖಾಸಗಿ ಆಸ್ಪತ್ರೆಗೆ ತೆರಳಿ ಹೆಚ್ಚಿನ ಪ್ರಮಾಣದ ಹಣ ವ್ಯಯಿಸಬೇಕಿತ್ತು. ಆದರೆ ಇದೀಗ ಸರ್ಕಾರ ಪ್ರತಿ ತಾಲೂಕು ಕೇಂದ್ರಗಳಲ್ಲೂ ಮಾನಸಿಕ ತೊಂದರೆಗಳಿಂದ ಬಳಲುತ್ತಿರುವವರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ. ಹುಣಸೂರಿನ ಸಾರ್ವಜನಿಕ ಆಸ್ಪತೆಯಲ್ಲಿ ಪ್ರತಿ ತಿಂಗಳ ಮೂರನೇ ಮಂಗಳವಾರದಂದು ಶಿಬಿರ ಆಯೋಜಿಸಲಾಗುತ್ತಿದ್ದು, ಚಿಕಿತ್ಸೆಯೊಂದಿಗೆ ಉಚಿತ ಔಷಧೋಪಚಾರ ಸಹ ಲಭ್ಯ ಇದೆ. ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಕುಟುಂಬಸ್ಥರು ಕರೆತಂದು ಚಿಕಿತ್ಸೆ ಕೊಡಿಸಬೇಕು ಎಂದು ಮನವಿ ಮಾಡಿದರು.


ಮನಶಾಸ್ತ್ರಜ್ಞ ಡಾ.ಸುದೀಪ್ತಿ, ಜಿಲ್ಲಾ ಆರೋಗ್ಯ ಉಪಶಿಕ್ಷಣಾಧಿಕಾರಿ ಪದ್ಮಾವತಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಎಪಿಡಿ ಸಂಸ್ಥೆ ಸಂಯೋಜನಾಧಿಕಾರಿ ಎ.ಪ್ರಕಾಶ್, ಟಿ.ಜಿ.ವಿಶ್ವನಾಥ್, ಸುನಂದಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net