ಮಾನಸಿಕ ಆರೋಗ್ಯ ಕುರಿತು ಉಚಿತ ಕೌನ್ಸೆಲಿಂಗ್

Published on

ಮೈಸೂರು: ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಕಂಡು ಬರುವ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ವಿವೇಕ ಫೌಂಡೇಷನ್‌ನಿಂದ ಉಚಿತ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ವಿವೇಕ ಆಸ್ಪತ್ರೆ ಹಾಗೂ ಫೌಂಡೇಷನ್ ನಿರ್ದೇಶಕ ಡಾ.ಮುರಳಿಕೃಷ್ಣ ತಿಳಿಸಿದರು.
ಆಸ್ಪತ್ರೆಯ 3ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ವಿವಿಧೆಡೆ ಒಂದು ವರ್ಷಕಾಲ ಉಚಿತ ಕೌನ್ಸೆಲಿಂಗ್, ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿರಾಜಪೇಟೆ, ಗೋಣಿಕೊಪ್ಪ, ಕೆ.ಆರ್.ಪೇಟೆ, ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ ತಾಲೂಕುಗಳಲ್ಲಿ ಉಚಿತ ಮಾನಸಿಕ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ನೇರ ಬರಲು ಸಾಧ್ಯವಾಗದಿದ್ದರೆ ಮೊಬೈಲ್ ಮೂಲಕವೂ ಕೌನ್ಸೆಲಿಂಗ್ ಸಹ ಮಾಡಿಕೊಡಲಾಗುವುದು. ಆಸಕ್ತರು ಮೊ: 6364111004 ಸಂಪರ್ಕಿಸಬಹುದು ಎಂದರು.
ಪ್ರಸೂತಿ ಮತ್ತು ಸ್ತ್ರೀ ರೋಗ್ಯ ತಜ್ಞರಾದ ಡಾ.ರಶ್ಮಿ ಕಿಶೋರ್ ಮಾತನಾಡಿ, ಹೆಣ್ಣು ಪ್ರಥಮವಾಗಿ ಗರ್ಭ ಧರಿಸಿದಾಗಿನಿಂದ ಹೆರಿಗೆ ಅಗುವವರೆವಿಗೂ ಕೆಲ ದೈಹಿಕ ಬದಲಾವಣೆ, ಮಾನಸಿಕ ಕಿರಿಕಿರಿ ಅನುಭವಿಸುತ್ತಾಳೆ. ಈ ವೇಳೆ ಮಾನಸಿಕ ಒತ್ತಡ ಹೆಚ್ಚಾಗಿ ಖಿನ್ನತೆಗೆ ಜಾರುವುದು ಇದೆ. ಆದ್ದರಿಂದ ಈ ಹಂತದಲ್ಲಿ ಚಿಕಿತ್ಸೆ ನೀಡುವುದು ಉತ್ತಮ ಎಂದರು.
ಮನೋವೈದ್ಯೆ ಡಾ.ಸುಧಾರಾಣಿ ಮಾತನಾಡಿ, ಗರ್ಭಿಣಿಯರು ಮತ್ತು ತಾಯ್ತನವನ್ನು ಯೋಜಿಸುತ್ತಿರುವ ಮಹಿಳೆಯರ ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲು ವರ್ಷಪೂರ್ತಿ ಮಾನಸಿಕ ಆರೋಗ್ಯ ಮೌಲ್ಯಮಾಪನ ಕಾರ್ಯಕ್ರಮ ಆಯೋಜಿಸಲಾಗಿದೆ. ಆಪ್ತ ಸಮಾಲೋಚನೆ ನೀಡುವ ಮೂಲಕ ಅವರಿಗೆ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.
ವೈದ್ಯ ಡಾ.ನರೇಂದ್ರ ಕುಮಾರ್ ಮಾತನಾಡಿ, ಮಾನಸಿಕ ಸಮಸ್ಯೆ ಯಾವ ವಯಸ್ಸು, ಲಿಂಗಬೇಧ ಇಲ್ಲದೇ ಬರಬಹುದು. ವಿದ್ಯಾರ್ಥಿಗಳಿಗೂ ಒತ್ತಡ ನಿಭಾಯಿಸುವುದು ಹೇಗೆ, ಪರೀಕ್ಷೆ ಯಾವ ರೀತಿ ತಯಾರಿ ಇರಬೇಕು ಎನ್ನುವ ಕುರಿತು ಶಿಬಿರ ಆಯೋಜಿಸಲು ಉದ್ದೇಶವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net