

ಚಿತ್ರದುರ್ಗ: ವಕೀಲರು, ಅಧಿಕಾರಿಗಳಲ್ಲಿ ಮಾನಸಿಕ ಆರೋಗ್ಯ ಕಾಯ್ದೆ ಅರಿವು ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾ ಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ್‌ವಾಸುದೇವ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಮನೋನ್ಯಾಯ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಕಾಯ್ದೆಗಳಿಗೂ ತನ್ನದೇ ಆದ ಮಹತ್ವವಿದೆ. ಅವುಗಳನ್ನು ಸಮಯಕ್ಕೆ ತಕ್ಕಹಾಗೆ ಬಳಸುವುದರಿಂದ ನೊಂದವರಿಗೆ ನ್ಯಾಯ ದೊರಕಿಸಿಕೊಡಬಹುದು ಎಂದರು.
ಮಾನಸಿಕ ಅಸ್ವಸ್ಥರು, ಬೌದ್ಧಿಕ ವೈಕಲ್ಯ ಹೊಂದಿರುವವರಿಗೆ ಉಚಿತ ಕಾನೂನು ನೆರವು ಒದಗಿಸಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಡಿ ಯೋಜನೆ ರೂಪಿಸಲಾಗಿದೆ. ಇದರ ಅನ್ವಯ ನ್ಯಾಯಾಲಯವೇ ಇವರ ಹಕ್ಕುಗಳ ರಕ್ಷಣೆ ಮಾಡುವ ಜವಾಬ್ದಾರಿ ಹೊಂದಿದೆ. ವೈದ್ಯರಿಂದ ಚಿಕಿತ್ಸೆ, ವಕೀಲರ ನೇಮಕ, ಪಾಲಕರಿಗೆ ಹಸ್ತಾಂತರ ಸೇರಿ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸುವ ಕೆಲಸವನ್ನು ನ್ಯಾಯಾಧೀಶರು ಮುತವರ್ಜಿಯಿಂದ ನಿರ್ವಹಿಸಬೇಕಾಗುತ್ತದೆ ಎಂದರು.
ಇದಕ್ಕೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ನ್ಯಾಯಧೀಶರಿಗೆ ನೆರವಾಗುತ್ತಾರೆ. ಎಲ್ಲ ರೀತಿಯ ಕಾನೂನು ಬದ್ಧ ಹಕ್ಕುಗಳಿರುವ ಮಾನಸಿಕ ಅಸ್ವಸ್ಥರು ಹಾಗೂ ಬೌದ್ಧಿಕ ವೈಕಲ್ಯತೆ ಹೊಂದಿರುವರವನ್ನು ತಾರತಮ್ಯದಿಂದ ನೋಡುವುದು ಸಮಾನತೆ ಹಕ್ಕಿನ ಉಲ್ಲಂಘನೆಯಾ ಗುತ್ತದೆ ಎಂದರು.
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಮಾತನಾಡಿ, ಸುಪ್ರೀಂಕೋರ್ಟ್‌ನ 2ನೇ ಮುಖ್ಯನ್ಯಾಯಾಮೂರ್ತಿ ಅವರು ಉಚಿತ ಕಾನೂನು ಸಹಾಯ ಒದಗಿಸುವ ಯೋಜನೆ ಅನುಷ್ಠಾನ, ನಿರ್ವಹಣೆ, ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. 2017ರಲ್ಲಿ ಕೇಂದ್ರ ಸರ್ಕಾರ ಅಂಗವಿಕಲರ ಹಕ್ಕುಗಳ ರಕ್ಷಣೆ ಹಾಗೂ ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆಗಳನ್ನು ಜಾರಿ ಮಾಡಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಜಿಲ್ಲಾ ಮಟ್ಟದ ಸಮಿತಿ ಅಧ್ಯಕ್ಷರು, ನಿವೃತ್ತ ಜಿಲ್ಲಾ ನ್ಯಾಯಧೀಶರು, ವಕೀಲರು, ಕಾನೂನು ಸಹಾಯಕರು, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ, ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಸಂವಿಧಾನದ 14, 21 ಹಾಗೂ 22 ವಿಧಿಗಳು ಮಾನಸಿಕ ಅಸ್ವಸ್ಥರು ಹಾಗೂ ಬೌದ್ಧಿಕ ವೈಕಲ್ಯ ಹೊಂದಿದವರ ಹಕ್ಕುಗಳ ರಕ್ಷಣೆ ಬಗ್ಗೆ ತಿಳಿಸುತ್ತವೆ. ಸಂವಿಧಾನದ ವಿಧಿ 22 ಪ್ರಕಾರ ಮಾನಸಿಕ ಅಸ್ವಸ್ಥರು ಹಾಗೂ ಬೌದ್ದಿಕ ವೈಕಲ್ಯ ಹೊಂದಿದವರು ಕಡ್ಡಾಯವಾಗಿ ವಕೀಲರ ಮೂಲಕವೇ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಬೇಕು. ಇದಕ್ಕಾಗಿ ನ್ಯಾಯಾಲಯವೇ ವಕೀಲರನ್ನು ನೇಮಿಸುತ್ತದೆ ಎಂದು ಹೇಳಿದರು.
ನಿವೃತ್ತ ನ್ಯಾಯಾಧೀಶ ನಾಡಿಗ ಜಯಸ್ವಾಮಿ ಕಾಯ್ದೆಗಳು ಹಾಗೂ ಯೋಜನೆ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಇತರರು ಉಪಸ್ಥಿತರಿದ್ದರು.