

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರ ಹಾಗೂ ಮಾನಸಗಂಗೋತ್ರಿ ಪ್ರೌಢಶಾಲೆ ವತಿಯಿಂದ ಶಾಲೆಯ ಸಭಾಂಗಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿಬ್ಬಾಣ ಅಂಗವಾಗಿ ಬುಧವಾರ ‘ಭಾರತ ಭಾಗ್ಯವಿದಾತ’ ರೂಪಕ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ನಿರ್ದೇಶಕ ಸೋಮಶೇಖರ್ ಮಾತನಾಡಿ , ಅಂಬೇಡ್ಕರ್ ಅವರ ಬರವಣಿಗೆ ಎಲ್ಲರಿಗೂ ದಾರಿ ತೋರುತ್ತದೆ. ಅವರ ಚಿಂತನೆಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಕ್ಷರಜ್ಞಾನ ಪಡೆದು ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಲು ವಿದ್ಯಾರ್ಥಿಗಳು ಶ್ರಮಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಜೀವನ ಸ್ಫೂರ್ತಿಯಾಗಲಿ ಎಂಬ ಕಾರಣಕ್ಕಾಗಿ ‘ಭಾರತ ಭಾಗ್ಯವಿದಾತ’ ರೂಪಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಗಂಗೋತ್ರಿ ಪ್ರೌಢಶಾಲೆಯ ಅಧ್ಯಕ್ಷ ಪ್ರೊ. ಬಿ.ಕೆ. ಜಗದೀಶ ಮಾತನಾಡಿ, ಅಂಬೇಡ್ಕರ್ ಅವರ ರೀತಿಯಲ್ಲಿ ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ಪ್ರಾಧ್ಯಾಪಕ ಪ್ರೊ.ಎಸ್. ನರೇಂದ್ರ ಕುಮಾರ್, ಸಂದರ್ಶಕ ಪ್ರಾಧ್ಯಾಪಕಿ ಆರ್. ಇಂದಿರಾ, ಕೇಂದ್ರದ ವಿಶ್ರಾಂತ ನಿರ್ದೇಶಕ ಜಯಚಂದ್ರ, ಮುಖ್ಯೋಪಾಧ್ಯಾಯ ಸಿ.ಎ. ಚಿಂದೇಗೌಡ ಹಾಗೂ ಇತರರು ಇದ್ದರು.