ಮಾನವೀಯತೆ ಇಲ್ಲದೆ ಮೂಕಜೀವಿಗಳ ಮಾರಣ ಹೋಮ

Published on

ಚಿಕ್ಕಬಳ್ಳಾಪುರ: ಕಾಡಿನ ಅಕ್ರಮ ಒತ್ತುವರಿ, ತಿಂಡಿ ನೀರಿನ ಸಮಸ್ಯೆಯಿಂದ ಪ್ರಾಣಿಗಳು ಜನವಸತಿ ಪ್ರದೇಶದತ್ತ ಬರುತ್ತಿರುತ್ತವೆ. ಇದೇ ವೇಳೆ ಹಾವಳಿಯ ನೆಪದಲ್ಲಿ ದುಷ್ಕರ್ಮಿಗಳು ಮೂಕಜೀವಿಗಳನ್ನು ಮಾನವೀಯತೆ ಇಲ್ಲದೇ ಕೊಲ್ಲುತ್ತಿರುವ ಪ್ರಕರಣಗಳು ಆಗಾಗ ವರದಿಯಾಗುತ್ತಿವೆ. ಇದಕ್ಕೆ ಗೌರಿಬಿದನೂರು ತಾಲೂಕಿನ ಕಲ್ಲೂಡಿ ಸೇತುವೆ ಬಳಿ 50 ಕ್ಕೂ ಹೆಚ್ಚು ಮೂಕ ಜೀವಿ ಕೋತಿಗಳನ್ನು ಕೊಂದು ಎಸೆಯುತ್ತಿದ್ದವರನ್ನು ಪೊಲೀಸರು ಬಂಧಿಸಿರುವುದು ಒಂದು ನಿದರ್ಶನ. 

ಇಲ್ಲಿ ಕೋತಿಗಳ ದೊಡ್ಡ ಮಾರಣ ಹೋಮವೇ ನಡೆದಿದ್ದು ಕೋತಿಗಳಿಗೆ ವಿಷವುಣಿಸಿ ಸಾಯಿಸಿರುವ ಶಂಕೆ ವ್ಯಕ್ತವಾಗಿದೆ. ಕಲ್ಲೂಡಿ ಸೇತುವೆ ಬಳಿ ಬೆಳಿಗ್ಗೆ ಟ್ಯಾಕ್ಟರ್ ನಲ್ಲಿ ತಂದು ಸತ್ತ ಕೋತಿಗಳನ್ನು ಎಸೆಯುತ್ತಿದ್ದ ಚಾಲಕ ಕೃಷ್ಣಪ್ಪನನ್ನು ಹಿಡಿದು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೃಷ್ಣಪ್ಪನ ವಿಚಾರಣೆ ನಡೆಯುತ್ತಿದೆ. ಜಮೀನಿನಲ್ಲಿ ಕೋತಿಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಕೊಲ್ಲಲಾಯಿತು ಎಂಬುದು ತನಿಖೆಯಿಂದ ತಿಳಿದು ಬಂದಿದೆ. 

ಮೂಕಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಒಂದು ವೇಳೆ ತೊಂದರೆಯಾದರೆ ಬೇರೆ ಕಡೆ ಬಿಟ್ಟು ಬರುವುದು ಸೇರಿ ಪರ್ಯಾಯ ಕ್ರಮಗಳನ್ನು ಅನುಸರಿಸಬೇಕು. ಅದು ಬಿಟ್ಟು ಕೊಲ್ಲುವುದು ಸರಿಯಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಾಣಿಪ್ರಿಯರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net