

ಔರಾದ್: ಮಾನವೀಯ ಮೌಲ್ಯಗಳು ಬದುಕಿನ ಆಧಾರ ಸ್ತಂಭಗಳಿದ್ದಂತೆ ಎಂದು ರಾಜಯೋಗಿನಿ ಬಿಕೆ ಸುನಂದಾ ಬಹೇನಜಿ ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ಭಾನುವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ಭಾನುವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮೌಲ್ಯಗಳು ಬದುಕಿಗೆ ಅವಶ್ಯವಾಗಿದ್ದು, ಯುವಜನರು ಅವುಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ಮೌಲ್ಯಗಳಿಲ್ಲದ ಜೀವನ ವ್ಯರ್ಥ. ಅವುಗಳನ್ನು ಅಳವಡಿಸಿಕೊಂಡಾಗ ಜೀವನ ಸಾರ್ಥಕಗೊಳ್ಳುವುದು. ಮೌಲ್ಯಗಳ ಕುರಿತು ಗುರು-ಹಿರಿಯರಿಂದ ತಿಳಿದುಕೊಂಡಿರುತ್ತೇವೆ. ಆದರೆ ಜೀವನದಲ್ಲಿ ಎಷ್ಟರ ಮಟ್ಟಿಗೆ ಅನುಸರಿಸುತ್ತೇವೆ ಎನ್ನುವುದು ಮುಖ್ಯ. ಹೆಣ್ಣು ಸಮಾಜದ ಕಣ್ಣು. ಬದುಕಿನ ಎಲ್ಲ ಸವಾಲು ಎದುರಿಸುವ ಗಟ್ಟಿಗಿತ್ತಿ ಆಕೆ. ಸಮಾಜದಲ್ಲಿ ಮಹಿಳೆಯರ ಸ್ಥಿತಿಗತಿ ಸುಧಾರಣೆಗೆ ದಿಟ್ಟ ಹೆಜ್ಜೆ ಇಡಬೇಕು ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ ಸುಹಾಸಿನಿ ಬಹೀನಜಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಮಹಿಳೆಗೆ ಬಹಳ ಗೌರವವಿದೆ. ಶರಣರು ಮಹಿಳೆಗೆ ಸಮಾನ ಹಕ್ಕು ಕೊಟ್ಟಿದ್ದರು. ಎಲ್ಲಿ ಮಹಿಳೆಗೆ ಗೌರವ ಸಿಗುತ್ತದೋ ಆ ಸಮಾಜ ಶ್ರೇಷ್ಠ ಎನಿಸಿಕೊಳ್ಳುತ್ತದೆ. ಒಂದು ಮಗು ಮುಂದೆ ಎತ್ತರಕ್ಕೆ ಬೆಳೆಯುವಲ್ಲಿ ತಾಯಿಯ ಪಾತ್ರ ದೊಡ್ಡದ್ದು ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ ಮಾತನಾಡಿ, ಪ್ರೀತಿ ಮತ್ತು ಮಮತೆಯ ಸಾಕಾರ ಮೂರ್ತಿಯಾದ ಮಹಿಳೆ ಪುರುಷರ ಸಾಧನೆಗೆ ಪ್ರೇರಣಾ ಶಕ್ತಿಯಾಗಿ ನಿಲ್ಲುತ್ತಾಳೆ. ಪ್ರತಿ ವ್ಯಕ್ತಿಯ ಜೀವನದಲ್ಲಿ ಮಹಿಳೆ ತಾಯಿಯಾಗಿ, ಸಹೋದರಿಯಾಗಿ, ಸೊಸೆಯಾಗಿ, ಮಗಳಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಮಹಿಳೆಗೆ ಗೌರವಿಸಬೇಕು ಎಂದರು.
ಪಪಂ ಅಧ್ಯಕ್ಷೆ ಸರುಬಾಯಿ ಘೂಳೆ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಆರತಿ ಪಾಟೀಲ್ ಮಾತನಾಡಿದರು.
ಡಾ. ಮೀನಾಕ್ಷಿ ಸ್ವಾಮಿ, ಆಪ್ತ ಸಮಾಲೋಚಕಿ ಪುಷ್ಪಾಂಜಲಿ ಎಂ.ಪಾಟೀಲ್ ಇತರರಿದ್ದರು.
ಶಾಂತಾ ಬಹೇನಜಿ ಸ್ವಾಗತಿಸಿದರು. ಛಾಯಾ ಬಹೇನಜಿ ನಿರೂಪಣೆ ಮಾಡಿ ವಂದಿಸಿದರು. ಕು. ಪ್ರಾಪ್ತಿ ಗಿರಣೆ, ಕು. ಸಾಕ್ಷಿ ಗಡಂತೆ, ಕು.ಸಂಧ್ಯಾ ಪಂಚಾಕ್ಷರಿ ನೃತ್ಯ ಎಲ್ಲರ ಗಮನ ಸೆಳೆಯಿತು.
====