ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ

15M.D.R.8
Published on

ಮದ್ದೂರು: ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವ ಜತೆಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಜತೆಗೆ ಸಮಾಜ ಮುಖಿ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಬೇಕೆಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ ಮತ್ತು ಗೈಡ್ಸ್ ಹಾಗೂ ಯುವ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯು ಜ್ಞಾನದ ದಾಹವನ್ನು ಹೆಚ್ಚಿಸಿಕೊಂಡು ಜೀವನದಲ್ಲಿ ಸಾರ್ಥಕತೆ ಬದುಕನ್ನು ರೂಢಿಸಿಕೊಂಡು ಉನ್ನತ ಮಟ್ಟದ ಸಾಧನೆ ಮಾಡುವ ಮೂಲಕ ಪಾಲಕರಿಗೆ, ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ಕೀರ್ತಿ ತರಬೇಕೆಂದು ತಿಳಿಸಿದರು.

ಅಕ್ಷರದಾಸೋಹ, ಜ್ಞಾನದಾಹ ಎಲ್ಲಿ ತುಂಬಿರುತ್ತದೋ ಅದು ಬಹು ಎತ್ತರಕ್ಕೆ ಕೊಂಡೊಯ್ಯಲಿದ್ದು, ವಿದ್ಯಾರ್ಥಿಗಳಾದ ತಾವುಗಳು ಜೀವನದುದ್ದಕ್ಕೂ ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ಬದುಕನ್ನು ರೂಪಿಸಿಕೊಂಡು ಸನ್ಮಾರ್ಗದತ್ತ ಮುಖಮಾಡುವ ಜತೆಗೆ ಉನ್ನತ ಸಾಧನೆಗೆ ಮುಂದಾಗುವಂತೆ ಅಭಿಪ್ರಾಯಪಟ್ಟರು.

ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದ್ದು, ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ದದಲ್ಲಿ ಪ್ರಮುಖ ಪಾತ್ರವಹಿಸಿ ಪುರುಷರಂತೆಯೇ ತಾವುಗಳು ಸಾಧನೆಯ ಹಾದಿಯಲ್ಲಿರುವುದಾಗಿ ರುಜುವಾತು ಮಾಡಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.

ಇಂತಹ ಸಾಧನೆಗಳಿಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಜತೆಗೆ ವಿದ್ಯಾರ್ಥಿ ದೆಸೆಯಲ್ಲೇ ಜ್ಞಾನದ ಶಕ್ತಿ ಹೆಚ್ಚಿಸಿಕೊಳ್ಳುವ ಜತೆಗೆ ದೇಶ ವಿದೇಶಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದರು.

ಮೈಸೂರು ಪ್ರಾದೇಶಿಕ ಕಚೇರಿಯ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಬಿ.ಚಂದ್ರಶೇಖರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಇಂಗ್ಲಿಷ್, ಹಿಂದಿ ಭಾಷೆಗಳು ಅನಿವಾರ್ಯವಾಗಿದ್ದು ಭಾಷೆಗಳಲ್ಲಿ ಹೆಚ್ಚು ಪ್ರವೀಣತೆಯನ್ನು ಹೊಂದಿದಲ್ಲಿ ದೇಶದ ವಿವಿಧ ಮೂಲೆಗಳಲ್ಲಿ ಉನ್ನತ ಸಾಧನೆ ಮಾಡಬಹುದಾಗಿದ್ದು, ಶಿಕ್ಷಣದ ಜತೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕೆಂದರು.

ಜ್ಞಾನದ ಜತೆಗೆ ಕೌಶಲ್ಯ ಮತ್ತು ಒಳ್ಳೆಯ ಅನುಭವಗಳು ಅನಿವಾರ್ಯವಾಗಿದ್ದು, ಧನಾತ್ಮಕ ಮನೋಭಾವನೆಗಳ ಮೂಲಕ ಉತ್ತಮ ಸಮಾಜಮುಖಿ ಸೇವಾ ಕಾರ್ಯಗಳನ್ನು ಕಾಲೇಜು ಹಂತದಲ್ಲೇ ರೂಢಿಸಿಕೊಂಡು ತಮ್ಮ ಮುಂದಿನ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು.

ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್, ಅಂತಾರಾಷ್ಟ್ರೀಯ ಖೋಖೊ ಕ್ರೀಡಾಪಟು ಬಿ.ಚೈತ್ರಾ, ಚುಂಚುಶ್ರೀ ಗೆಳೆಯರ ಬಳಗದ ಅಧ್ಯಕ್ಷ ಪ್ರೊ.ಬಿ.ಕೃಷ್ಣ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ.ಡಿ.ಮಹಾಲಿಂಗಯ್ಯ, ಪ್ರಾಂಶುಪಾಲ ಪ್ರೊ. ಕೆ.ಬಿ.ನಾರಾಯಣ್, ಗಾಯಕಿ ನೇತ್ರಾವತಿ, ಉಪನ್ಯಾಸಕರಾದ ಎಂ.ಮಹದೇವಗೌಡ, ಕೆ.ಬಿ.ವೆಂಕಟೇಶ್, ಎಲ್.ಲತಾ, ರೂಪ, ಗಂಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net