ಮಾನವನ ಸ್ವಾರ್ಥಕ್ಕೆ ಪ್ರಕೃತಿ ನಾಶ

25 (1)
Published on

ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್​ ಹೇಳಿಕೆ

ತುಮಕೂರು: ಮಾನವನು ತನ್ನ ಸ್ವಾರ್ಥ ಮತ್ತು ದುರಾಸೆಯಿಂದ ಪ್ರಕೃತಿಯ ಮೇಲೆ ಅಕ್ರಮ ನಡೆಸುತ್ತಿದ್ದು, ಪರಿಸರ ಜಾಗೃತಿ ಇಂದಿನ ಯುಗದಲ್ಲಿ ಅತ್ಯಂತ ಅಗತ್ಯ ವಿಷಯ ಎಂದು ವಿಶ್ವ ವಿದ್ಯಾಲಯ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್​ ಹೇಳಿದರು.

ವಿವಿ ಸಾರ್ವಜನಿಕ ಆಡಳಿತ, ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಂತರ ಕಾಲೇಜು ವಿದ್ಯಾರ್ಥಿಗಳ "ವೇದ್ಯ ಸ್ಪರ್ಧಾ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ ನಾಶ, ಅನಿಯಂತ್ರಿತ ಕಾರ್ಖಾನೆಗಳ ಸ್ಥಾಪನೆ ಮತ್ತು ಬೆಳೆದ ನಗರೀಕರಣದಿಂದ ಮರಗಳು ನಾಶವಾಗಿ ಬಹುಮುಖ್ಯವಾಗಿ ಮಾನವ ಅಳಿವಿನ ದಡದಲ್ಲಿ ನಿಂತಿದ್ದಾನೆ. ಪರಿಸರದ ಸಂಪತ್ತುಗಳನ್ನು ದುರುಪಯೋಗ ಮಾಡಿದ ಪರಿಣಾಮವಾಗಿ ಜಾಗತಿಕ ತಾಪಮಾನದಲ್ಲಿ ಭಾರಿ ಏರಿಕೆಯಾಗುತ್ತಿದೆ ಎಂದರು.

ಪ್ಲಾಸ್ಟಿಕ ಬಳಕೆಯು ಇನ್ನೊಂದು ಗಂಭೀರ ಪರಿಸರ ಸವಾಲಾಗಿದೆ. ದಿನೇ ದಿನೇ ಪ್ಲಾಸ್ಟಿಕ್​ ಉತ್ಪಾದನೆ ಮತ್ತು ಬಳಕೆ ಹೆಚ್ಚುತ್ತಿದ್ದು, ಅದು ನಾಶವಾಗದ ವಸ್ತುವಾದ್ದರಿಂದ ಭೂವಿಯ ಮೇಲೆಯೇ ಅನಗತ್ಯವಾದ ಹೊರೆ ಆಗುತ್ತಿದೆ. ಪ್ಲಾಸ್ಟಿಕ್​ ತ್ಯಾಜ್ಯದಿಂದ ನದಿಗಳು, ಸಮುದ್ರಗಳು ಮತ್ತು ಮಣ್ಣು ಕಲುಷಿತವಾಗುತ್ತಿವೆ. ಪ್ಲಾಸ್ಟಿಕ್​ ಮುಕ್ತ ಪರಿಸರ ನಿರ್ಮಿಸದಿದ್ದರೆ ಭವಿಷ್ಯದಲ್ಲಿ ಮಾನವ ಜನಾಂಗವೇ ಉಳಿಯುವುದು ಕಷ್ಟ. ಆದ್ದರಿಂದ ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸೋಣ ಪ್ಲಾಸ್ಟಿಕ್​ ಬಳಕೆ ಕಡಿಮೆ ಮಾಡೋಣ ಮತ್ತು ನೈಸರ್ಗಿಕ ಸಂಪತ್ತನ್ನು ಉಳಿಸಿ ಬೆಳೆಸೋಣ ಎಂದು ಸಲಹೆ ನೀಡಿದರು. ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ. ನಾವು ಪ್ರಕೃತಿಯ ಒಂದು ಭಾಗ. ಪ್ರಕೃತಿಯ ಎದುರು ನಾವು ತಲೆ ಭಾಗಬೇಕಾದುದು ನಿಸರ್ಗದ ನಿಯಮ. ಮನುಷ್ಯನ ಜನ್ಮ ನೀಡಿದ ತಾಯಿಗೆ ಮತ್ತು ಆತನಿಗೆ ಆಹಾರ ನೀಡುವ ಭೂಮಿಗೆ ಗೌರವ ನೀಡಬೇಕು. ಈ ಭೂಮಿಗೆ, ಪ್ರಕೃತಿಗೆ ನಾವು ಕೃತಜ್ಞರಾಗಿರಬೇಕು. ನದಿಗಳು, ಕಾಡುಗಳು, ಪ್ರಾಣಿಗಳು, ಪರ್ವತಗಳು ಇವೆಲ್ಲವುಗಳ ರಕ್ಷಣೆ ನಮ್ಮ ಹೊಣೆ ಎಂದು ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಪಕ ಪ್ರೊ.ಕೆ.ಸಿದ್ದಪ್ಪ ಹೇಳಿದರು.

ನಾವು ಮೂರನೇ ಯುಗಕ್ಕೆ ಕಾಲಿಡುತ್ತಿದ್ದೇವೆ. ತಂತ್ರಜ್ಞಾನ, ಮನುಷ್ಯನ ವಿಕಾಸ ಮತ್ತು ವೇಗದ ಬದುಕು. ಈ ಮಾರ್ಗ ಸದ್ಯಕ್ಕೆ ಸುರಕ್ಷಿತವಲ್ಲ ಎಂದು ತೋರುತ್ತಿದೆ. ಪ್ರಕೃತಿಯನ್ನು ನಾಶಮಾಡಿದ ಪರಿಣಾಮವಾಗಿ ಹವಾಮಾನ ಬದಲಾವಣೆ, ಭೂಕಂಪ, ಪ್ರವಾಹದಂತಹ ಸಂಕಟಗಳನ್ನು ಎದುರಿಸುತ್ತಿದ್ದೇವೆ. ನಾಮ ಈಗಲಾದರೂ ಎಚ್ಚೆತ್ತುಕೊಂಡು ಪ್ರಕೃತಿಗೆ ಗೌರವ ನೀಡುವ, ಸಂರಕ್ಷಿಸುವ, ಮತ್ತು ಕೃತಜ್ಞತೆಯಿಂದ ನಡಿಗೆಯಿಡುವ ನೈತಿಕ ಜವಾಬ್ದಾರಿ ಅರಿತುಕೊಳ್ಳಬೇಕು ಎಂದರು.

ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಧ್ಯಕ್ಷತೆವಹಿಸಿದ್ದರು. ಸಾರ್ವಜನಿಕ ಆಡಳಿತ ಅಧ್ಯಯನ ಮತ್ತು ಸಂಶೋಧಾನ ವಿಭಾಗದ ಡಾ.ಕೆ.ಸಿ.ಸುರೇಶ್​, ರಸಪ್ರಶ್ನೆ ಸ್ಪರ್ಧೆಯ ತೀರ್ಪುಗಾರ ಸುಹಾಸ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net