ಮಾನವನ ದುರಾಸೆಗೆ ಸಮುದ್ರ ಹಾಳು: ಡಾ.ವಿ.ಎನ್. ನಾಯಕ್ ವಿಷಾಧ

27
Published on

ಮೈಸೂರು: ಜೀವ ವಿಕಾಸಕ್ಕೆ ಮೂಲವಾದ ಸಮುದ್ರವನ್ನೇ ಮನುಷ್ಯ ಹಾಳುಗೆಡವುತ್ತಿದ್ದಾನೆ. ಇದು ಹೀಗೆಯೇ ಮುಂದವರಿದರೆ ಅಪಾಯ ತಪ್ಪಿದ್ದಲ್ಲ ಎಂದು ವಿಶ್ರಾಂತ ಪ್ರಾಧ್ಯಾಪಕರಾದ ಸಾಗರ ವಿಜ್ಞಾನ ತಜ್ಞರಾದ ಡಾ. ವಿ.ಎನ್.ನಾಯಕ್ ಎಚ್ಚರಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಿಂದ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ 14ನೇ ರಾಜ್ಯ ವಿಜ್ಞಾನ ಸಮ್ಮೇಳನದಲ್ಲಿ ಅವರು ಸಾಗರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಎಂಬ ವಿಷಯ ಕುರಿತು ಶುಕ್ರವಾರ ವಿಷಯ ಮಂಡಿಸಿದರು.
ಜೀವ ವಿಕಾಸದಿಂದ ಮನುಷ್ಯ ಹುಟ್ಟಿದ್ದು ಸಮುದ್ರದಿಂದ ಎನ್ನುವ ಮಾತಿದೆ. ಈಗ ಆತನೇ ಸಮುದ್ರವನ್ನು ಹಾಳು ಮಾಡುತ್ತಿದ್ದಾನೆ. ಗಣೇಶ ವಿಸರ್ಜನೆ, ಹಡಗುಗಳಿಗೆ ಬಣ್ಣ ಬಳಿಯುವುದರಿಂದ ಹೊರ ಬರುವ ರಾಸಾಯನಿಕ, ಇಂಧನ ತಯಾರಿಕೆ, ಹಡುಗುಗಳಿಂದ ಹೊರ ಸೂಸುವ ಇಂಧನ ಮಾಲಿನ್ಯದಿಂದ ಸಮುದ್ರ ಜೀವಿಗಳು ಸಾಯುತ್ತಿದೆ. ಮತ್ತೊಂದೆಡೆ ಸಮುದ್ರದ ಮಧ್ಯದಲ್ಲಿ ಕಟ್ಟಡಗಳನ್ನು ಕಟ್ಟುವುದರಿಂದ ಸಮುದ್ರಕ್ಕೆ ಅಪಾಯ ಉಂಟಾಗುತ್ತದೆ ಎಂದು ಹೇಳಿದರು.
1970ಕ್ಕಿಂತ ಮೊದಲು ಪ್ಲಾಸ್ಟಿಕ್ ಉಪಯೋಗವೇ ಇರಲಿಲ್ಲ. ಆದರೆ ಇಂತ ಅದು ಸರ್ವಾವ್ಯಾಪ್ತಿಯಾಗಿದೆ. ಭೂಮಿಯನ್ನು ಉಳಿಸಬೇಕಾದರೆ ಏಕ ಬಳಕೆಯ ಪ್ಲಾಸ್ಟಿಕ್ ನಿಲ್ಲಿಸಬೇಕು.ಇಂದು ಶೇ.50 ಕ್ಕಿಂತ ಹೆಚ್ಚು ಏಕ ಬಳಕೆಯ ಪ್ಲಾಸ್ಟಿಕ್ ಉಪಯೋಗಿಸಲಾಗುತ್ತಿದೆ. ಇದು ಪರಿಸರ, ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಟೀಕಿಸಿದರು.
ಮಂಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಯಕರ ಭಂಡಾರಿ ಅವರು ವೈವಿಧ್ಯ ಜೀವ ಜಗತ್ತಿನ ಜೀವಾಳ ಎಂಬ ವಿಷಯ ಕುರಿತು ವಿಷಯ ಮಂಡಿಸಿ, ಜಗತ್ತು ಪ್ರಭೇದಗಳು, ಜೀವವ್ಯಿದ್ಯತೆಯ ತೊಟ್ಟಿಲು ಜೀವರಾಶಿಯ ಒಟ್ಟು ವೈವಿಧ್ಯತೆ ಮತ್ತು ಅದರ ನಡುವಿನ ಭಿನ್ನತೆಗಳನ್ನು ತಿಳಿಸಿದರು,
ಈ ಜಗತ್ತಿನಲ್ಲಿ 80-170 ರಷ್ಟು ಲಕ್ಷ ಪ್ರಭೇದಗಳಿದ್ದು ಶೇಕಡ 8ರಷ್ಟು ವೈವಿಧ್ಯತೆಯನ್ನು ಹೊಂದಿದೆ. ಪ್ರಭೇದಗಳು ಎಲ್ಲ ಕಡೆ ಒಂದೇ ರೀತಿಯಲ್ಲಿ ಇರುವುದಿಲ್ಲ. ಸ್ಥಳೀಯ ಭಾಗಗಳಲ್ಲಿ ಹೆಚ್ಚಾಗಿ ಪ್ರಭೇದಗಳು ಕಂಡುಬರುತ್ತವೆ, ಒಂದು ಪ್ರಭೇದ ನಾಶವಾದರೆ ಆದರ ಕಾರಣಕ್ಕೆ ಇನ್ನೊಂದು ಪ್ರಭೇದ ನಾಶವಾಗುತ್ತಿದೆ. ಹಾಗಾಗಿ ಜೈವಿಕ ವೈವಿಧ್ಯತೆಯನ್ನು ರಕ್ಷಣೆ ಮಾಡುವುದು ತುಂಬಾ ಮುಖ್ಯ ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರಾದ ಶಿವಕುಮಾರ, ಎಚ್.ವಿ. ಮುರಳೀಧರ, ಎಚ್.ಎಲ್. ಚಲುವರಾಜು, ಕೃಷ್ಣ ಚೈತನ್ಯ, ರಾಜೀವ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net