

ಬಾಳೆಹೊನ್ನೂರು: ಅಧ್ಯಾತ್ಮ ವಿದ್ಯೆ ಅರಿವಿಗೆ ಬರಲು ಮಾನವತ್ವ ಅರಿತಿರಬೇಕು. ಜೀವನ ಮಾನವತ್ವದ ಚೌಕಟ್ಟು ಬಿಟ್ಟು ಹೋದರೆ ಎಲ್ಲವೂ ವ್ಯರ್ಥವಾಗಲಿದೆ ಎಂದು ಹರಿಹರಪುರದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ನುಡಿದರು. ವಿದ್ಯಾಗಣಪತಿ ಸೇವಾ ಸಮಿತಿ ಗಣೇಶೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಧಾರ್ವಿುಕ ಸಭೆ, ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾನವತ್ವ ಮರೆತ ಮನುಷ್ಯನೇ ರಾಕ್ಷಸನಾಗಿದ್ದಾನೆ. ಜಗತ್ತಿನಲ್ಲಿ ಸಂಸ್ಕೃತಿ, ಸಂಪ್ರದಾಯ ಬೇರೆ ಇರಬಹುದು. ಆದರೆ ಮಾನವತ್ವ ಎಲ್ಲ ಕಡೆಯೂ ಒಂದೇ. ಪ್ರತಿಯೊಬ್ಬರೂ ಮಾನವತಾವಾದಿಗಳಾಬೇಕು. ಆಗ ಮಾತ್ರ ಜೀವನ ಪರಿಪೂರ್ಣವಾಗಲು ಸಾಧ್ಯ ಎಂದರು. ಶೋಷಣೆ ಎನ್ನುವುದು ನಮ್ಮ ಅಂತಃಕರಣಕ್ಕೆ ಇಷ್ಟವಾಗದ ವಿಷಯ. ಜಾತಿ, ಅಂತಸ್ತು, ಅಧಿಕಾರ ಬಳಸಿಕೊಂಡು ಶೋಷಣೆ ನಡೆಯಕೂಡದು. ಮನುಷ್ಯ ತನ್ನಲ್ಲಿರುವ ಪಶುಗುಣಗಳನ್ನು ನೀಗಿಸಿಕೊಂಡು ದೈವತ್ವ ಅರಿತುಕೊಳ್ಳಬೇಕು. ಚಿಂತನೆ, ಮಾತು, ಕೃತಿಗಳಲ್ಲಿ ಮಾನವತ್ವ ಇರಬೇಕು. ನಾವು ಕಲಿಯುತ್ತಿರುವ ಲೌಕಿಕ ವಿದ್ಯೆಗಳು ತಾತ್ಕಾಲಿಕವಾಗಿ ನಮ್ಮ ದುಃಖ ದೂರ ಮಾಡುತ್ತವೆ. ಆದರೆ ಸಂಪೂರ್ಣ ದುಃಖ ನಾಶ ಮಾಡಲು ಯಾವ ವಿದ್ಯೆಗೂ ಸಾಧ್ಯವಿಲ್ಲ. ಮನುಷ್ಯನ ದುಃಖ ನಿವಾರಣೆ ಮಾಡುವ ಶಕ್ತಿ ಅಧ್ಯಾತ್ಮ ವಿದ್ಯೆಗಿದೆ ಎಂದು ಹೇಳಿದರು. ವಿಶ್ವದ ಎಲ್ಲೆಡೆ ಇಂದು ನಾನು ಎಂದು ಹೆಚ್ಚು ಪ್ರಚಲಿತದಲ್ಲಿದೆ. ಆದರೆ ನಾನು ಎಂಬುದು ಸ್ವರೂಪವಲ್ಲ. ನಾನು ಎಂದರೆ ಕೇವಲ ಅಹಂ. ಪ್ರಪಂಚವನ್ನು ತಿಳಿಯುವ ಪ್ರಯತ್ನವನ್ನು ನಾವು ಮಾಡುತ್ತೇವೆ. ನಾನು ಯಾರು ಎಂದು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ನಮ್ಮನ್ನು ನಾವು ಸಮಾಜದಲ್ಲಿ ತಪ್ಪಾಗಿ ಗುರುತಿಸಿಕೊಳ್ಳುತ್ತಿದ್ದೇವೆ. ಅಂತಃಕರಣಕ್ಕೆ ನಿಜವಾದ ಆನಂದ ದೊರೆಯಬೇಕೆಂದರೆ ನಾನು ಯಾರು ಎನ್ನುವುದನ್ನು ತಿಳಿದುಕೊಳ್ಳಬೇಕಿದೆ. ನಮ್ಮ ಸ್ವರೂಪ ಎನ್ನುವುದು ಅಚಲ, ಶುದ್ಧ, ಚೈನ್ಯವಾದ ಸ್ವರೂಪವಾಗಿದೆ. ನಮ್ಮದು ಅತೀತವಾದ ಸ್ವರೂಪ ಎಂದರು.