ಚಾಮರಾಜನಗರ: ಮಾನವನ ಹಸ್ತಕ್ಷೇಪದಿಂದ ನೈಸರ್ಗಿಕ ಸಂಪನ್ಮೂಲಗಳು ಬರಿದಾಗುತ್ತಿದ್ದು, ಪರಿಸರ ನಾಶವಾಗುತ್ತಿದೆ ಎಂದು ಭೋಗಾಪುರ ಎಸ್ಸಿ, ಎಸ್ಟಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು ಆತಂಕವ್ಯಕ್ತಪಡಿಸಿದರು.
ತಾಲೂಕಿನ ಭೋಗಾಪುರದಲ್ಲಿರುವ ದೀಪ ಅಕಾಡೆಮಿ ಅಂಧ ಮಕ್ಕಳ ಶಾಲೆಯಲ್ಲಿ ರಂಗವಾಹಿನಿ ಸಂಸ್ಥೆ ಏರ್ಪಡಿಸಿದ್ದ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಅವರಿಗೆ ಎಂ.ಮಾದಯ್ಯ ಪರಿಸರ ರತ್ನ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.
ಪ್ರಕೃತಿ ಚೆನ್ನಾಗಿದ್ದರೆ ಮಾತ್ರ ಮಾನವನ ಉಳಿವು. ಮಾನವನ ಹಸ್ತಕ್ಷೇಪದಿಂದ ನೈಸರ್ಗಿಕ ಸಂಪನ್ಮೂಲಗಳು ಬರಿದಾಗುತ್ತಿವೆ. ಬೇಸಿಗೆ ಕಾಲದಲ್ಲಿ ನೀರಿನ ಪ್ರಾಮುಖ್ಯತೆ, ಅಗತ್ಯತೆ ಹಾಗೂ ಅಮೂಲ್ಯತೆಯ ಬಗ್ಗೆ ಅರಿವು ಮೂಡಿಸಬೇಕು. ಪರಿಸರ ಸಂರಕ್ಷಿಸದಿದ್ದರೆ ಮನುಕುಲದ ವಿನಾಶ ನಿಶ್ಚಿತ ಎಂದು ಹೇಳಿದರು.
ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರತಿದಿನ ಗಿಡಗಳನ್ನು ನೆಟ್ಟು, ಗಿಡಗಳಿಗೆ ನೀರುಣಿಸಿ ಪೋಷಿಸುವ ಕೆಲಸ ಮಾಡುತ್ತಿರುವ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಅವರು ಜಿಲ್ಲೆಯಲ್ಲಿ ಮಾದರಿ ವ್ಯಕ್ತಿಯಾಗಿದ್ದಾರೆ. ಅದೇ ರೀತಿ ರಂಗವಾಹಿನಿ ಸಂಸ್ಥೆಯ ಸಿ.ಎಂ.ನರಸಿಂಹಮೂರ್ತಿಯವರು ತಮ್ಮ ತಂದೆಯವರ ಹೆಸರಿನಲ್ಲಿ ಪರಿಸರ ರತ್ನ ಪ್ರಶಸ್ತಿಯನ್ನು ನೀಡುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಂಗ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗೂ ಚಿತ್ರನಟ ಉಮ್ಮತ್ತೂರು ಬಸವರಾಜು, ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್, ಸಿದ್ದಾರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಂಗಸ್ವಾಮಿ, ರಂಗವಾಹಿನಿ ಸಂಸ್ಥೆಯ ಎಂ. ಸಂಗೀತ, ಸಿ.ಎಂ ಸೌಭಾಗ್ಯ, ದೀಪ ಅಕಾಡೆಮಿಯ ಅಂಧ ಮಕ್ಕಳ ಶಾಲೆ ಶಿಕ್ಷಕರಾದ ಕುಮಾರ್, ಸುದೀಪ್, ಬೇಬಿ, ಜಾನಪದ ಕಲಾವಿದ ರಾಮಸಮುದ್ರ ಗೌರಿಶಂಕರ್, ದೊಡ್ಡರಾಯ ಪೇಟೆ ಮಹೇಶ್ ಮತ್ತಿತರರು ಹಾಜರಿದ್ದರು.