ಮಾನವ ಹಕ್ಕುಗಳ ಉಲ್ಲಂಘನೆ ಪರಿಹರಿಸಲು ಕ್ರಮವಹಿಸಿ: ಟಿ.ಶ್ಯಾಮಭಟ್

ಮಾನವ ಹಕ್ಕುಗಳ ಉಲ್ಲಂಘನೆ ಪರಿಹರಿಸಲು ಕ್ರಮವಹಿಸಿ: ಟಿ.ಶ್ಯಾಮಭಟ್
Published on

ಹಾಸನ: ಸಾರ್ವಜನಿಕರಿಗೆ ಮೂಲಭೂತ ಹಕ್ಕುಗಳು ಸರಿಯಾಗಿ ದೊರಕುವಂತೆ ನೋಡಿಕೊಳ್ಳುವುದರ ಜೊತೆಗೆ ಮಾನವ ಹಕ್ಕುಗಳು ಉಲ್ಲಂಘನೆಯಾದರೆ ತಕ್ಷಣ ಪರಿಹರಿಸಲು ಅಧಿಕಾರಿಗಳು ಕ್ರಮವಹಿಸುವಂತೆ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮಭಟ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಪರಿಶೀಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ನ್ಯಾಯಯುತವಾಗಿ ಎಲ್ಲಾ ಹಕ್ಕುಗಳನ್ನು ದೊರೆಕಿಸುವ ನಿಟ್ಟಿನಲ್ಲಿ ಮಾನವ ಹಕ್ಕುಗಳ ಆಯೋಗ ಕಾರ್ಯನಿರ್ವಹಿಸುತ್ತಿದ್ದು, ಆಯೋಗಕ್ಕೆ ಬರುವ ದೂರು ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿಯಾಗುವಂತೆ ಅಧಿಕಾರಿಗಳು ನಿಗದಿ ಸಮಯದಲ್ಲಿ ಆಯೋಗಕ್ಕೆ ವರದಿ ನೀಡುವಂತೆ ತಿಳಿಸಿದರು.
ಆಯೋಗದ ತಂಡ ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾ ಮಟ್ಟದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈಗಾಗಲೇ 8 ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ ಸ್ಥಗಿತಗೊಳಿಸಲಾಗಿತ್ತು. ಈಗ ಪುನಃ ಆರಂಭಿಸಿದ್ದು, ಜಿಲ್ಲಾ ಮಟ್ಟದಲ್ಲಿಯೇ ಅಧಿಕಾರಿಗಳ ಅಭಿಪ್ರಾಯ ಪಡೆದು ಪ್ರಕರಣಗಳನ್ನು ಇತ್ಯರ್ಥಪಡಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮೂಲಭೂತ ಹಕ್ಕುಗಳು ಸಿಕ್ಕುತ್ತಿಲ್ಲವೆಂದು ಸಾರ್ವಜನಿಕರು ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಆಯೋಗವು ಯಾವ ಕಾರಣಕ್ಕೆ ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂಬುದನ್ನು ಅರಿಯಲು ಜೊತೆಗೆ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳಿಂದ ವರದಿ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಜನರು ಸಮಸ್ಯೆಗಳನ್ನು ಹೇಳಿಕೊಂಡು ಕಚೇರಿಗೆ ಬಂದಾಗ ಅಧಿಕಾರಿಗಳು ಸಾವಧಾನದಿಂದ ಆಲಿಸಿ ಪರಿಹಾರ ಒದಗಿಸಲು ಕ್ರಮವಹಿಸುವಂತೆ ತಿಳಿಸಿದರಲ್ಲದೆ, ಸಾರ್ವಜನಿಕರೊಂದಿಗೆ ಮಾನವೀಯತೆಯಿಂದ ಸ್ಪಂದಿಸಿ, ಸೌಜನ್ಯದಿಂದ ನಡೆದುಕೊಂಡರೆ ಅರ್ಧ ಕಷ್ಟ ಬಗೆಹರಿದಂತಾಗುತ್ತದೆ ಎಂದು ಹೇಳಿದರು.
ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಅವರು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ನೈಸರ್ಗಿಕವಾಗಿ ಬರುವ ಎಲ್ಲಾ ಹಕ್ಕುಗಳು ದೊರಕುವಂತೆ ನೋಡಿಕೊಳ್ಳುವುದು, ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ತಡೆಯುವುದು, ಹಕ್ಕುಗಳಿಗೆ ದಕ್ಕೆ ಬಂದಾಗ ಸೂಕ್ತ ಪರಿಹಾರ ಒದಗಿಸುವುದು ಮಾನವ ಹಕ್ಕುಗಳ ಆಯೋಗದ ಕಾರ್ಯವಾಗಿದೆ ಎಂದು ತಿಳಿಸಿದರು.
ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ತಡೆಯುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡುವಂತೆ ತಿಳಿಸಿದರು. ಸರ್ಕಾರದ ಮಾರ್ಗಸೂಚಿಗಳನ್ವಯ ಬಂದಿಖಾನೆ, ಹಾಸ್ಟೆಲ್, ರಿಮ್ಯಾಂಡ್ ಹೊಂಗಳಲ್ಲಿ ಮಾನವ ಹಕ್ಕುಗಳಿಗೆ ದಕ್ಕೆಯಾಗದಂತೆ ನಿಗಾವಹಿಸಿ ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು..
ಸರ್ಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪದಿದ್ದರೆ, ಅದು ಕೂಡ ಮಾನವ ಹಕ್ಕು ಉಲ್ಲಂಘನೆಯಾದಂತೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಿ ಸವಲತ್ತು ಪಡೆಯಲು ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕ ಶೌಚಾಲಯವನ್ನು ಉತ್ತಮವಾಗಿ ನಿರ್ವಹಿಸದಿದ್ದರೆ, ನಾಗರೀಕ ಹಕ್ಕು ಉಲ್ಲಂಘನೆಯಾದಂತೆ ಅದೇ ರೀತಿ ಚರಂಡಿ ಸ್ವಚ್ಚತೆ ಮಾಡದೆ ಜನರಿಗೆ ತೊಂದರೆ ಉಂಟಾದರೆ ಅದು ಕೂಡ ಸಾರ್ವಜನಿಕ ಹಕ್ಕು ಉಲ್ಲಂಘನೆ ಆಗುತ್ತದೆ ಎಂದು ತಿಳಿಸಿದರು.
ಆಯೋಗಕ್ಕೆ ಬರುವ ದೂರುಗಳನ್ನು ಪರಿಶೀಲಿಸಿ ನೊಂದವರಿಗೆ ಪರಿಹಾರ ಒದಗಿಸಲು ಶಿಫಾರಸ್ಸು ಮಾಡಲು ವಸ್ತುಸ್ಥಿತಿ ಬಗ್ಗೆ ಅಧಿಕಾರಿಗಳು ನಿಗದಿತ ಅವಧಿಯೊಳಗೆ ವರದಿ ನೀಡುವ ಮೂಲಕ ಆಯೋಗ ಸಮರ್ಥವಾಗಿ ಕರ್ತವ್ಯ ನಿರ್ವಹಿಸಲು ಸಹಕರಿಸುವಂತೆ ತಿಳಿಸಿದರು. ಅನಿಷ್ಟ ಪದ್ದತಿಗಳಿಂದ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ, ಗೊಲ್ಲರ ಹಟ್ಟಿಗಳಲ್ಲಿ ವಾಸಿಸುವ ಜನರಿಗೆ ಅರಿವು ಮೂಡಿಸಿ, ಈ ಅನಿಷ್ಟ ಪದ್ದತಿಗಳನ್ನು ತಡೆಯುವ ಮೂಲಕ ಹಕ್ಕುಗಳ ಉಲ್ಲಂಘನೆೆಯಾಗದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಮಾತನಾಡಿ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ನೀಡಿರುವ ಸಲಹೆ ಸೂಚನೆಗಳನ್ನು ಅಧಿಕಾರಿಗಳು ಪಾಲಿಸುವ ಮೂಲಕ ಉತ್ತಮವಾಗಿ ಕರ್ತವ್ಯ ನಿರ್ವಹಿಸುವಂತೆ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಆಯೋಗಕ್ಕೆ ನೀಡಿದ್ದ ದೂರುಗಳನ್ನು ಇಲಾಖಾವಾರು ಪರಿಶೀಲಿಸಿ ಇತ್ಯರ್ಥಪಡಿಸಲು ಕ್ರಮಕೈಗೊಳ್ಳಲಾಯಿತು.
ಮಾನವ ಹಕ್ಕುಗಳ ಆಯೋಗದ ಸದಸ್ಯ ಕಾರ್ಯದರ್ಶಿ ಎ.ದಿನೇಶ್ ಸಂಪತ್ ರಾಜ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಅಪ್ತ ಕಾರ್ಯದರ್ಶಿ ಅರುಣ್ ಪೂಜಾರ್ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net