ಬಳ್ಳಾರಿ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಸೌಲಭ್ಯ ನೀಡಲು ಜೈಲು ಸಿಬ್ಬಂದಿ ನಿರಾಕರಿಸುತ್ತಿದ್ದು, ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಪತ್ನಿ ವಿಜಯಲಕ್ಷ್ಮೀ ಜೈಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಸೌಲಭ್ಯ ಪಡೆಯಲು ನ್ಯಾಯಾಲಯ ಮೊರೆ ಹೋಗಿ, ಆದೇಶ ತೆಗೆದುಕೊಂಡು ಬನ್ನಿ, ಬಳಿಕ ಸೌಲಭ್ಯ ನೀಡಲಾಗುವುದು ಎಂದು ಅಧಿಕಾರಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಉತ್ತರಿಸಿದ್ದಾರೆ ಎಂದು ಮೂಲಗಳು ತಿಳಿಸಿದವು. ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೈಲು ನಿಯಮದಂತೆ ದರ್ಶನ್‌ಗೆ ಸೌಲಭ್ಯ ನೀಡಲಾಗಿದೆ. ಪ್ರತ್ಯೇಕವಾಗಿ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಎಲ್ಲ ಕೈದಿಗಳಂತೆ ಅವರು ಕೂಡ ಒಬ್ಬರು. ಜೈಲಿನ ವ್ಯವಸ್ಥೆಗೆ ಸದ್ಯ ದರ್ಶನ್ ಹೊಂದಿಕೊಳ್ಳುತ್ತಿದ್ದು, ಯಾವುದೇ ಸಮಸ್ಯೆಯಿಲ್ಲ. ಎರಡ್ಮೂರು ದಿನಕ್ಕೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ಆರೋಗ್ಯದಲ್ಲಿ ಸಮಸ್ಯೆಯಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದರು.