

ತುಮಕೂರು: ಮಾನವ ಹಕ್ಕುಗಳ ಅರಿವಿಲ್ಲದವರು, ಕಾನೂನಿನ ತಿಳಿವಳಿಕೆಯಿಲ್ಲದವರು, ಅಮಾಯಕರು ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಅಂತಹವರಲ್ಲಿ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಮರಿಯಪ್ಪ ಹೇಳಿದರು.
ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಮಾನವ ಹಕ್ಕುಗಳ ಜಾಗೃತಿ ದಳದಿಂದ ಬುಧವಾರ ಆಯೋಜಿಸಿದ್ದ "ವಿಶ್ವ ಮಾನವ ಹಕ್ಕುಗಳ ದಿನಾಚರಣೆ'ಯಲ್ಲಿ ಮಾತನಾಡಿ, ಸಮಾಜದ ಪ್ರತಿಯೊಬ್ಬರೂ ತಾರತಮ್ಯವಿಲ್ಲದೆ, ಸಮಾನವಾಗಿ ಬಾಳುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಹಕ್ಕುಗಳ ಅರಿವಿಲ್ಲದವರಿಂದ ಕಾನೂನಿನ ಉಲ್ಲಂಘನೆ ಆಗಬಹುದು ಅಥವಾ ಹಕ್ಕುಗಳ ಬಗ್ಗೆ ತಿಳಿದಿಲ್ಲದವರ ಮೇಲೆ ದೌರ್ಜನ್ಯ ನಡೆಯಬಹುದು. ಈ ಕಾರಣದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮಾನವ ಹಕ್ಕುಗಳ ಅರಿವು ಮೂಡಿಸಬೇಕು ಎಂದರು. ಯಾರೂ ಯಾರ ಹಕ್ಕನ್ನು ಕಸಿಯುವಂತಿಲ್ಲ, ಎಲ್ಲರಿಗೂ ಸಮಾನ ಹಕ್ಕಿದೆ. ಇದಕ್ಕೆ ಸಂಬಂಧಿಸಿದಂತೆ ನಿಬಂಧನೆಗಳನ್ನು ರೂಪಿಸಲಾಗಿದೆ. ಹಕ್ಕುಗಳ ಅರಿವು ಬೆಳೆಸಿಕೊಂಡರೆ ಸಮಾಜದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬಾಳಲು ಸಾಧ್ಯವಾಗುತ್ತದೆ. ಹಕ್ಕುಗಳು ದಮನವಾಗದಂತೆ ನೆರವಾಗಬೇಕು. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತನ್ನ ಮೂಲಭೂತ ಹಕ್ಕುಗಳಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದರು.
ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿವೆ. ಮಕ್ಕಳ ಮುಗ್ಧತೆಯ ದುರುಪಯೋಗವಾಗುತ್ತಿದೆ. ಒಂದು ಜೈಲಿನಲ್ಲಿ ಸುಮಾರು ಮೂರನೇ ಒಂದರಷ್ಟು ಪೋಕ್ಸೋ ಪ್ರಕರಣದ ಕೈದಿಗಳಿರುತ್ತಾರೆ ಎಂದರೆ, ಮಕ್ಕಳ ಮೇಲಿನ ದೌರ್ಜನ್ಯ ಯಾವ ಮಟ್ಟಕೆ ಇದೆ ಎಂಬುದು ಕಳವಳಕಾರಿ ವಿಚಾರ. ಆರೋಗ್ಯ ಇಲಾಖೆಯ ಅಂಕಿ&ಅಂಶದ ಪ್ರಕಾರ ರಾಜ್ಯದಲ್ಲಿ 1.60 ಲಕ್ಷ ಅಪ್ರಾಪ್ತ ಹೆಣ್ಣುಮಕ್ಕಳು ಗರ್ಭಿಣಿಯರಾಗಿದ್ದಾರೆ. ಹೀಗಿದ್ದ ಮೇಲೆ ಅಷ್ಟೂ ಪ್ರಕರಣಗಳೂ ಪೋಕ್ಸೋ ಅಡಿ ಬರುತ್ತವೆ ಅಲ್ಲವೆ? ಎಂದರು.
ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕರಣ ಗಳಿಗೆ ಕಡಿವಾಣ ಬೀಳಬೇಕು. ಈ ಬಗ್ಗೆ ಹಿರಿಯವರು ಎಚ್ಚರವಹಿಸಬೇಕು. ಮಕ್ಕಳ ಶಿಕ್ಷಣ, ರಕ್ಷಣೆ, ಆಹಾರ ಎಲ್ಲವೂ ಮೂಲಭೂತ ಹಕ್ಕಿನ ಅಡಿ ಬರುತ್ತವೆ. ಆ ಹಕ್ಕುಗಳಿಗೆ ಧಕ್ಕೆ ಆಗಬಾರದು. ಈ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದರು.ಮಾನವ ಹಕ್ಕುಗಳ ಜಾಗೃತಿ ದಳದ ಜಿಲ್ಲಾಧ್ಯಕ್ಷ ಎಚ್.ಎಂ.ರವೀಶಯ್ಯ ಮಾತನಾಡಿ, ಎಲ್ಲರೂ ಸಮಾನರಾಗಿ, ಸ್ವಾಭಿಮಾನದಿಂದ ಬಾಳಲು ಮಾನವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿಯಬೇಕು, ಹಕ್ಕುಗಳ ಉಲ್ಲಂಘನೆಯಾದಾಗ, ಯಾರಾದರೂ ತಮ್ಮ ಹಕ್ಕುಗಳ ದಮನ ಮಾಡಿದಾಗ ಆಯೋಗಕ್ಕೆ ದೂರು ನೀಡಿ ತಮ್ಮ ಹಕ್ಕು ಚಲಾಯಿಸಬಹುದು ಎಂದರು.
ಪ್ರತಿ ವ್ಯಕ್ತಿಯೂ ತನ್ನ ಹಕ್ಕುಗಳ ಬಗ್ಗೆ ತಿಳಿಯಬೇಕು ಎಂದು ಮಾನವ ಹಕ್ಕುಗಳ ಆಯೋಗ ವಿವಿಧ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ. ವಿಶೇಷವಾಗಿ ಮಕ್ಕಳು, ಯುವ ಜನರು ಮಾನವ ಹಕ್ಕುಗಳು ಹಾಗೂ ಈ ನೆಲದ ಕಾನೂನಿನ ಅರಿವು ಬೆಳೆಸಿಕೊಂಡರೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳು ಸಾಧ್ಯ ಎಂದು ಹೇಳಿದರು. ವಿದ್ಯೋದಯ ಫೌಂಡೇಶನ್ನ ರಾಜು, ಮಾನವ ಹಕ್ಕುಗಳ ಜಾಗೃತ ದಳದ ರಾಜ್ಯ ಅಧ್ಯಕ್ಷ ಲೋಕೇಶ್ವರ್, ವಿದ್ಯೋದಯ ಕಾನೂನು ಕಾಲೇಜಿನ ಪ್ರಾಚಾರ್ಯ ಶಮಾ ಸೈಯದಿ, ಉಪನ್ಯಾಸಕ ಡಾ.ಜಿ.ವೆಂಕಟೇಶ್, ವಕೀಲ ಶಿವಕುಮಾರ್, ಮಾನವ ಹಕ್ಕುಗಳ ಜಾಗೃತಿ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪ್ರಸಾದ್,
ವಿದ್ಯೋದಯ ಸಂಸ್ಥೆ ಸಿಇಒ ಪ್ರೊ.ಕೆ.ಚಂದ್ರಣ್ಣ ಇದ್ದರು.
ಕಾನೂನು ಉಲ್ಲಂಘಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಲು ಹೋದಾಗ ಯಾವ ಕಾರಣಕ್ಕಾಗಿ ಬಂಧಿಸಲು ಬಂದಿದ್ದೇವೆ. ಅವನಿಂದ ಆಗಿರುವ ತಪು$್ಪಗಳೇನು ಎಂದು ಪೊಲೀಸರು ಆ ವ್ಯಕ್ತಿಗೆ ಬರಹದಲ್ಲಿ ಬರದು ನೀಡಬೇಕು. ಯಾವ ಕಾರಣಕ್ಕಾಗಿ ದಸ್ತಗಿರಿ ಮಾಡುತ್ತಿದ್ದೇವೆ ಎಂದು ಅವನ ಕುಟುಂಬದವರಿಗೂ ತಿಳಿಸಬೇಕು. ಕಾನೂನು ಉಲ್ಲಂಘಿಸಿದವನಿಗೂ ಮಾನವ ಹಕ್ಕಗಳನ್ನು ನಮ್ಮ ಸಂವಿಧಾನ ನೀಡಿದೆ ಅದರಂತೆ ಎಲ್ಲರೂ ನಡೆದುಕೊಳ್ಳಬೇಕು.| ವಿ.ಮರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕ