ಮಾನವ ಸರಪಳಿಯೊಂದಿಗೆ ಪ್ರಜಾಪ್ರಭುತ್ವ ದಿನಾಚರಣೆ

CTD --000000
Published on

ಚಿತ್ರದುರ್ಗ: ಹಿರಿಯೂರು ನಗರದಲ್ಲಿ ಭಾನುವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ ನೀಡಲಾಯಿತು. ಹಿರಿಯೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ದಿನಾಚರಣೆ ಹಾಗೂ ಮಾನವ ಸರಪಳಿಯನ್ನು ಉದ್ಘಾ ಟಿಸಿದರು. ಈ ವೇಳೆ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಪರವಾಗಿ ಜಯಘೋಷಗಳೊಂದಿಗೆ ಜೈ ಜೋಡಿಸಿದ್ದವರು ಜೈ ಹಿಂದ್,ಜೈ ಕರ್ನಾಟಕ ಎಂಬ ಘೋಷಣೆ ಪ್ರತಿಧ್ವನಿಸಿತು.
ಜಿಲ್ಲಾಡಳಿತ,ತಾಪಂ,ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ
ವೇದಿಕೆ ಕಾರ‌್ಯಕ್ರಮಕ್ಕೂ ಉದ್ಘಾಟನೆಗೂ ಮುನ್ನ ಸಚಿವರು,ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ,ಎಂಎಲ್‌ಸಿ ಡಿ.ಟಿ.ಶ್ರೀನಿವಾಸ್ ಮತ್ತಿತರ ಗಣ್ಯ ರು,ಅಧಿಕಾರಿಗಳು ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ದೇಶದಲ್ಲೇ ವಿನೂತನವಾಗಿ ರಾಜ್ಯದ ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ರಚನೆ ಮೂಲಕ ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಬಳ್ಳಾರಿ ಗಡಿ ಮೊಳಕಾಲ್ಮೂರು ತಾಲೂಕು ಮೇಲಿನಕಣಿವೆ ಗ್ರಾಮದಿಂದ ಹಿರಿಯೂರು ತಾಲೂಕು ಜವಗೊಂಡನಹಳ್ಳಿ ತುಮಕೂರು ಗಡಿವರೆಗೆ 145 ಕಿ.ಮಿ.ಉದ್ದ ಮಾನವ ಸರಪಳಿ ರಚಿಸಲಾಯಿತು.
ಮೊಳಕಾಲ್ಮೂರು,ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕುಗಳಲ್ಲಿ ಹಾದು ಹೋಗಿದ್ದ ಈ ಮಾನವ ಸರಪಳಿಯಲ್ಲಿ 1ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು, ರೈತ,ದಲಿತ ಸಂಘಟನೆಗಳು,ರಾಷ್ಟ್ರೋತ್ಥಾನ,ಸ್ವ ಸಹಾಯ ಸಂಘಟನೆಗಳು, ಆಶಾ,ಅಂಗನವಾಡಿ ಕಾರ‌್ಯ ಕರ್ತರು ಸೇರಿದಂತೆ ನಾಗರಿಕರು ಸಂಭ್ರಮದಿಂದ ದಿನಾಚರಣೆಯಲ್ಲಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವದ ಹಿರಿಮೆಯನ್ನು ಸಾರಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಡಿಸಿ ಬಿ.ಟಿ.ಕುಮಾರಸ್ವಾಮಿ ಸಂವಿಧಾನ ಪೀಠಿಕೆಯನ್ನು ವಾಚಿಸಿದರು. ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಸ್ವಾಗತಿಸಿದರು. ಮಾನವ ಸರಪಳಿ ಮುಕ್ತಾಯ ಬಳಿಕ ಸಚಿವರು ಸಸಿ ನೆಟ್ಟರು. ರಾಜ್ಯಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್,ನಗರಸಭೆ ಅಧ್ಯಕ್ಷ ಅಜಯ್‌ಕುಮಾರ್,ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ,ಸದಸ್ಯರು,
ಎಸ್ಪಿ ರಂಜಿತ್‌ಕುಮಾರ್ ಬಂಡಾರು,ಸಮಾಜ ಕಲ್ಯಾಣ ಇಲಾಖೆ ಜೆಡಿ ಜಗದೀಶ್‌ಹೆಬ್ಬಳ್ಳಿ,ಬಿಇಒ ತಿಪ್ಪೇಸ್ವಾಮಿ,ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಂ.ಮಹೇಂದ್ರಕುಮಾರ್,ಪಿಯು ಡಿಡಿ ಆರ್.ಪುಟ್ಟಸ್ವಾಮಿ, ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್,ಗ್ಯಾರಂಟಿ ಜಿಲ್ಲಾಧ್ಯಕ್ಷ ಶಿವಣ್ಣ,ಉಪಾಧ್ಯಕ್ಷ ಮೈಲಾರಪ್ಪ,ಡಿಎಸ್ ಡಾ.ಎಸ್.ಪಿ.ರವೀಂದ್ರ ಮತ್ತಿತರರು ಇದ್ದರು. ಕೆಲವೆಡೆ ಬಿಸಿಲಿನ ತಾಪಮಾನದಿಂದಾಗಿ ಹಲವೆಡೆ ಮಾನವ ಸರಪಳಿ ಬ್ರೇಕ್ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net