

ಚಿತ್ರದುರ್ಗ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಾಜ್ಯಾದ್ಯಂತ ಸೆ. 15ರಂದು ಏರ್ಪಡಿಸಿದ್ದ ಪ್ರಜಾಪ್ರಭುತ್ವದ ಜಾಗೃತಿ ಮಾನವ ಸರಪಳಿ ರಚನೆಗೆ ಸಂಬಂಧಿಸಿದ ಐದು ವಿಭಾಗಗಳಲ್ಲಿ ಚಿತ್ರದುರ್ಗ ಜಿಲ್ಲೆ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದಿದೆ.
ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನ. 26ರಂದು ಏರ್ಪಡಿಸಿರುವ ಸಂವಿಧಾನ ದಿನಾಚರಣೆ ಕಾರ‌್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸೆ. 15ರಂದು ಬೀದರ್‌ನಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಾಣ ಸಹಿತ ವಿವಿಧ ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ದಾಖಲಾಗಿದೆ.
ಮಾನವ ಸರಪಳಿ ನಾವೀನ್ಯ, ಅತ್ಯಂತ ಉದ್ದದ ಮಾನವ ಸರಪಳಿ, ಅತಿ ಹೆಚ್ಚು ಗಿಡಗಳನ್ನು ನೆಡುವುದು, ಅತೀ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಸಂಸ್ಥೆಗಳ ಭಾಗವಹಿಸುವಿಕೆ ಎಂದು ಐದು ವಿಭಾಗಳಲ್ಲಿ ತಲಾ ಮೂರು ಪ್ರಶಸ್ತಿಗಳನ್ನು ಕೊಡಲು ತೀರ್ಮಾನಿಸಲಾಗಿತ್ತು.
ಇದರಲ್ಲಿ ಚಿತ್ರದುರ್ಗ ಜಿಲ್ಲೆ ಮಾನವ ಸರಪಳಿ ನಿರ್ಮಾಣದಲ್ಲಿ ನಾವೀನ್ಯದಲ್ಲಿ ಪ್ರಥಮ ಹಾಗೂ ಅತೀ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳ ಭಾಗವಹಿಸುವಿಕೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ‌್ಯನಿರ್ವಾಹಕ ನಿರ್ದೇಶಕ ಪಿ.ಎಸ್.ಕಾಂತರಾಜು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.