

ಮೈಸೂರು: ಮಾನವ ಸಂಪನ್ಮೂಲ ನಿರ್ವಹಣೆಯ ವಿಷಯದಲ್ಲಿ ಪ್ರಮುಖವಾದ ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಪರಿಣಾಮಕಾರಿ ಅಂಶದ ಮೇಲೆ ಡಿಜಿಟಲೀಕರಣವು ಧನಾತ್ಮಕ ಪ್ರಭಾವ ಬೀರುತ್ತಿದೆ ಎಂದು ಶ್ನೆಡರ್ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಉಪಾಧ್ಯಕ್ಷ ಅಮಿತ್ ಕುಮಾರ್ ಹೇಳಿದರು.
ನಗರದ ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಫಾರ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್‌ನಲ್ಲಿ ಗುರುವಾರ ಆಯೋಜಿಸಿದ್ದ ‘ಡಿಜಿಟಲ್ ಯುಗದಲ್ಲಿ ಮಾನವ ಬಂಡವಾಳ ನಿರ್ವಹಣೆಯ ಪಯಣ’ ಕುರಿತು ಅಂತಾರಾಷ್ಟ್ರೀಯ ಮಾನವ ಸಂಪನ್ಮೂಲ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಡಿಜಿಟಲ್ ಯುಗದಲ್ಲಿ ಕಂಪನಿಗಳು ನಾಯಕತ್ವ ಶೈಲಿ ಮತ್ತು ಉದ್ಯೋಗಿಗಳ ಮನಸ್ಥಿತಿಗಳ ಬದಲಾವಣೆಗಳ ಬಗ್ಗೆ ಗಮನಹರಿಸಬೇಕು. ತಮ್ಮ ಆದರ್ಶವನ್ನು ಅನುಸರಿಸುವ ಮೂಲಕ ಭವಿಷ್ಯದ ನಾಯಕರಾಗಬೇಕೆಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು. ಸಂಸ್ಥೆಗಳಲ್ಲಿ ಅವಶ್ಯವಿರುವ ವಿವಿಧತೆ ಮತ್ತು ಒಳಗೊಳ್ಳುವಿಕೆಯನ್ನು ಬೆಳೆಸುವ ಬದಲಾವಣೆಯ ಸೂತ್ರಧಾರಿಗಳಾಗುವ ಮೂಲಕ ನಾಯಕರಾಗಬೇಕು ಎಂದರು.
ಹೈದರಾಬಾದ್‌ನ ಪೆಪ್ಸಿಕೊ ಕೆಪೆಬಿಲಿಟಿ ಸೆಂಟರ್‌ನ ಅಸೋಸಿಯೇಟ್ ನಿರ್ದೇಶಕ ಕಲ್ಯಾಣ್ ವಾರಾಣಸಿ ಮಾತನಾಡಿ, ಮಾನವ ಸಂಪನ್ಮೂಲ ಪ್ರಕ್ರಿಯೆಗಳಲ್ಲಿ ಡಿಜಿಟಲೀಕರಣದ ಅವಶ್ಯಕತೆ ಇದೆ. ಆಕರ್ಷಣೆ, ನೇಮಕಾತಿ, ಉದ್ಯೋಗಕ್ಕೆ ಪ್ರವೇಶ, ಅಭಿವೃದ್ಧಿ, ಉದ್ಯೋಗದಲ್ಲಿ ಉಳಿಯುವುದು ಮತ್ತು ಉದ್ಯೋಗಿಗಳ ನಿರ್ಗಮನ ಈ ಎಲ್ಲ ಮಾನವ ಸಂಪನ್ಮೂಲ ಚಟುವಟಿಕೆಗಳನ್ನು ಡಿಜಿಟಲ್ ಪರಿಕರಗಳು ಹೇಗೆ ಉತ್ತಮಗೊಳಿಸಲಿವೆ ಎಂದು ವಿವರಿಸಿದರು.
ಕಾರ್ಯನಿರ್ವಹಣೆ ಮತ್ತು ಪರಿಹಾರ ನಿರ್ವಹಣೆ ವಿಷಯಗಳಲ್ಲಿ ವೇಗವಾಗಿ ನಿರ್ಧಾರ ತೆಗೆದುಕೊಳ್ಳಲು ದತ್ತಾಂಶಗಳು ಸಂಸ್ಥೆಗಳಿಗೆ ಸಹಾಯಕವಾಗಲಿವೆ. ಡಿಜಿಟಲ್ ಪ್ರಗತಿಯಿಂದಾಗಿ ಅನೇಕ ಸಂಸ್ಥೆಗಳು 2ನೇ ಹಂತ ನಗರಗಳನ್ನು ತಮ್ಮ ಉದ್ಯಮಗಳನ್ನು ವಿಸ್ತರಿಸಲು ಆಯ್ಕೆ ಮಾಡುತ್ತಿವೆ ಎಂದು ಹೇಳಿದರು.
ಸಂಸ್ಥೆಯ ಡೀನ್ ಡಾ.ಮೌಸುಮಿ ಸೇನ್ ಗುಪ್ತ ಮಾತನಾಡಿ, ಡಿಜಿಟಲ್ ತಂತ್ರಜ್ಞಾನಗಳು ಮಾನವ ಸಂಪನ್ಮೂಲ ಪ್ರಕ್ರಿಯೆಗಳಿಗೆ ಪೂರಕ ಉಪಕರಣಗಳಾಗಿದ್ದರೂ, ಹೆಚ್ಚುತ್ತಿರುವ ಕೆಲಸದ ಅಭದ್ರತೆ, ಉದ್ಯೋಗಿಗಳ ಮಾನಸಿಕ ಆರೋಗ್ಯದಲ್ಲಿ ಆಗುತ್ತಿರುವ ಇಳಿಮುಖದ ಸವಾಲುಗಳು ಮುಂತಾದ ಸಮಸ್ಯೆಗಳ ಬಗ್ಗೆಯೂ ಕಂಪನಿಗಳ ಮುಖ್ಯಸ್ಥರು ಗಮನಹರಿಸಿ, ಸೂಕ್ತ ಸಮಯದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸಂಸ್ಥೆ ನಿರ್ದೇಶಕ ಡಾ.ಎಸ್.ಎನ್.ಪ್ರಸಾದ್ ಮಾತನಾಡಿ, ಡಿಜಿಟಲ್ ಪರಿಕರಗಳ ಸೂಕ್ತ ಉಪಯೋಗದಿಂದ ಸಮಯ ಕಳೆದಂತೆ ಸಂವಹನ ಅಭ್ಯಾಸಗಳು ಹೇಗೆ ವಿಕಾಸಗೊಳ್ಳುತ್ತಿವೆ. ಮಾನವ ಸಂಪನ್ಮೂಲ ಪ್ರಕ್ರಿಯೆಗಳಲ್ಲಿ ಡಿಜಿಟಲ್ ಪರಿಕರಗಳ ಬಳಕೆಯ ವಿಷಯವನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಉದ್ಯೋಗದಾತರು ಮತ್ತು ಉದ್ಯೋಗಿಗಳು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಉದ್ಯಮ ನಾಯಕರು ಮತ್ತು ಶಿಕ್ಷಣ ತಜ್ಞರಾದ ಸುನಮ್ ದತ್ತ, ಡಾ. ರೈಹಾನ್ ತಖ್ಹಿ ಸೈಯದ್, ರವಿ ಕುಮಾರ್, ಡಾ. ಸ್ಟೀಫನ್ ಅರೊ-ಗೊರ್ಡಾನ್, ಜೆ.ಗಣೇಶ್, ನಿರ್ಭಯ್ ಲುಮ್ಡೆ ಸೇರಿದಂತೆ ಭಾರತ ಮತ್ತು ವಿದೇಶಗಳಿಂದ ಅಂದಾಜು 125 ಜನರು ಪಾಲ್ಗೊಂಡಿದ್ದರು.