

ಚಿತ್ರದುರ್ಗ: ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲ ಸಂಪದ್ಭರಿತವಾಗಿರಬೇಕು. ಇಂಥ ಮಾನವ ಸಂಪನ್ಮೂಲ ನಿರ್ಮಾಣ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆ ನಗರದ ಕೆಇಬಿ ಸಮುದಾಯ ಭ ವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ-ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಶಿಕ್ಷಕರಿಗೆ ಉತ್ತಮ ಗೌರವವಿದೆ. ಗುರುಗಳಿಂದ ಶ್ರೇಷ್ಠವಾದದ್ದನ್ನು ಸಮಾಜ ಬಯಸುತ್ತದೆ. ಪ್ರತಿ ವಿದ್ಯಾರ್ಥಿ ಜೀವನದಲ್ಲಿಯೂ ಶಿಕ್ಷಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ವಿದ್ಯಾರ್ಥಿಗಳ ಬದುಕು ಶಿಕ್ಷಕರಿಂದ ಮಾತ್ರ ಬೆಳಗಲು ಸಾಧ್ಯ. ಇದನ್ನು ಅರಿತು ಕೆಲಸ ಮಾಡ ಬೇಕಾಗಿದೆ ಎಂದರು.
ಸಮಾಜದಲ್ಲಿಂದು ಮೌಲ್ಯಗಳು ಕುಸಿಯುತ್ತಿವೆ. ಪಾಠ ಬೋಧನೆ ಜತೆ ಮಾನವೀಯ, ನೈತಿಕ ಮೌಲ್ಯಗಳನ್ನು ಮತ್ತು ವೈಚಾರಿಕ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾಗಿದೆ. ಇದು ಸಮಾಜದ ಅತ್ಯಂತ ತುರ್ತು ಎಂದು ಭಾವಿಸಿ ಶಿಕ್ಷಕರು ಕೆಲಸ ಮಾಡಬೇಕಾಗಿದೆ ಎಂದರು.
ಶಿಕ್ಷಕರು ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ಶ್ರಮಿಸಬೇಕು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿಗಳನ್ನು ನಡೆಸಬೇಕು. ಅವರ ಕಲಿಕಾ ಕೌಶಲ ಹೆಚ್ಚಿಸುವ ಮೂಲಕ ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯದಲ್ಲೇ 10ನೇ ಸ್ಥಾನದೊಳಗೆ ಬರಲು ಸಂಘಟಿತವಾಗಿ ಶ್ರಮಿಸಬೇಕೆಂದು ತಿಳಿಸಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಶಾಖೆ ಮನವಿಗೆ ಸ್ಪಂದಿಸಿದ ಸಚಿವರು, ಗುರುಭವನ ನಿರ್ಮಾಣಕ್ಕೆ 2 ಕೋಟಿ ರೂ.ಅನುದಾನ ನೀಡುವುದಾಗಿ ಭರವಸೆ ನೀಡಿದರು. ಎಲ್ಲ ಶಾಸಕರ ಸಹಕಾರದೊಂದಿಗೆ ಮುಂದಿನ ವರ್ಷದೊಳಗೆ ಭವನ ನಿರ್ಮಿಸಲಾಗುವುದು ಎಂದು ಹೇಳಿದರು.
ಎಂಎಲ್‌ಸಿ ಕೆ.ಎಸ್. ನವೀನ್ ಮಾತನಾಡಿ, ಡಾ. ಸರ್ಪಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಒಬ್ಬ ಅಗ್ರಗಣ್ಯ ಶಿಕ್ಷಕ, ತತ್ವಜ್ಞಾನಿ ಮತ್ತು ರಾಜನೀತಿಜ್ಞರಾಗಿದ್ದರು. ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದವರು. ಶಿಕ್ಷಣದ ಬಗ್ಗೆ ಅವರ ಅಚಲ ಶೃದ್ಧೆಯಿಂದಾಗಿ ಅವರ ಜನ್ಮದಿನವನ್ನು ಸೆ.5ರಂದು ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ ಎಂದರು.
ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗುರುಭವನಕ್ಕೆ 5 ಕೋಟಿ ರೂ. ಬಿಡುಗಡೆ ಮಾಡುವಂತೆ ಸಚಿವರನ್ನು ಒತ್ತಾಯಿಸಿದರು.
ಡಿಡಿಪಿಐ ಎಂ.ಆರ್. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. 2025-26ನೇ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿಶೇಷ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರನ್ನು ಸನ್ಮಾನಿಸಲಾಯಿತು.
ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಜಿಪಂ ಸಿಇಒ ಡಾ.ಎಸ್. ಆಕಾಶ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಮೆಹಬೂಬ್ ಜಿಲಾನಿ ಖುರೇಷಿ, ಡಯಟ್ ಪ್ರಾಚಾರ್ಯ ನಾಸಿರುದ್ದೀನ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ರಾಜ್ಯ ಪರಿಷತ್ ಸದಸ್ಯ ಎಸ್. ರಾಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಬಿ. ಮಹಂತೇಶ್ ಇತರರು ಇದ್ದರು.
ಶಾಲೆ, ಅಂಗನವಾಡಿಗಳ ಮೂಲ ಸೌಕರ್ಯಕ್ಕೆ ಆದ್ಯತೆ
ಮೊಳಕಾಲ್ಮೂರು: ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ 7.50 ಕೋಟಿ ರೂ.ವೆಚ್ಚದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಾನೂ ಒಬ್ಬ ಶಿಕ್ಷಕರ ಮಗನಾಗಿ ಶಿಕ್ಷಣ ಕ್ಷೇತ್ರದ ಬೆಳವಣಿಗೆ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದೇನೆ. ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಮೂಲಕ ಬರದ ನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡುವುದು ನನ್ನ ಮಹದಾಸೆಯಾಗಿದೆ ಎಂದರು.
ಕ್ಷೇತ್ರಕ್ಕೆ ಸಿಗುವ ಅನುದಾನದಲ್ಲಿ ಭಹುಪಾಲು ಶಾಲೆಗಳ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಶಿಕ್ಷಕರು ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡುವ ಕೆಲಸ ಮಾಡಬೇಕು. ಅಧಿಕಾರ ಯಾರಿಗೂ ಶಾಶ್ವತವಲ್ಲ. ನಾವು ಮಾಡುವ ಕೆಲಸಗಳಿಂದ ಸಮಾಜ ಸುಧಾರಣೆ ದಿಕ್ಕಿನಲ್ಲಿ ಸಾಗಬೇಕು ಎಂದು ತಿಳಿಸಿದರು.
ಬಿಇಒ ಇ. ನಿರ್ಮಲಾದೇವಿ ಮಾತನಾಡಿ, ಸಮಾಜ ಸುಧಾರಣೆ ಹರಿಕಾರ ಡಾ. ಸರ್ವೇಪಲ್ಲಿ ರಾಧಕೃಷ್ಣನ್ ಅವರ ಜನ್ಮ ದಿನಾಚರಣೆ ಅತ್ಯಂತ ಅರ್ಥಪೂರ್ಣ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಕಲಿತ ವಿದ್ಯೆಯನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡಬೇಕು ಎಂದರು.
ಶಾಸಕ ಎನ್.ವೈ. ಗೋಪಾಲಕೃಷ್ಣ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಹೆಮ್ಮೆಯ ಸಂಗತಿ. ಅವರ ಮಾರ್ಗದರ್ಶನದಲ್ಲಿ ಶಾಲೆಗಳ ಸುಧಾರಣೆಗೆ ನಾವೆಲ್ಲರೂ ಬದ್ದರಾಗಿ ದುಡಿಯಬೇಕಾಗಿದೆ ಎಂದರು.
ಪಪಂ ಅಧ್ಯಕ್ಷೆ ಲೀಲಾವತಿ ಸಿದ್ದಣ್ಣ, ತಹಸೀಲ್ದಾರ್ ಟಿ. ಜಗದೀಶ್, ಕಸಾಪ ತಾಲೂಕು ಅಧ್ಯಕ್ಷ ಜಿಂಕಾ ಶ್ರೀನಿವಾಸ, ಬಿಆರ್‌ಸಿ ಕೆ. ತಿಪ್ಪೇಸ್ವಾಮಿ, ದೈಹಿಕ ಶಿಕ್ಷಣ ಪರಿವೀಕ್ಷಕ ಅಬ್ರಾಹಾಂ, ಅಕ್ಷರ ದಾಸೋಹ ಅಧಿಕಾರಿ ಪಾತಲಿಂಗಪ್ಪ, ಪ್ರಾಚಾರ್ಯ ಬಿ. ಗೋವಿಂದಪ್ಪ, ಡಾ. ಎಸ್.ಕೆ. ಯೋಗಾನಂದ, ಡಾ. ರಂಗಪ್ಪ, ರಾಮಚಂದ್ರಯ್ಯ, ಎ.ಆರ್. ಅಶೋಕ್, ಎಂ. ಮಲ್ಲಿಕಾರ್ಜುನ, ಬಿ. ಬಡಯ್ಯ, ಡಿ.ಹರಿ, ಕೆ.ಎಚ್. ಸಣ್ಣಯಲ್ಲಪ್ಪ, ಡಿ. ರಾಜಣ್ಣ, ಕರಿಬಸಪ್ಪ, ನಾಗಭೂಷಣರಡ್ಡಿ, ಎಚ್. ಹನುಮಂತಪ್ಪ ಇತರರಿದ್ದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಒತ್ತುಕೊಡಿ
ಚಳ್ಳಕೆರೆ: ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ(ಶಿಕ್ಷಕರ ದಿನ)ಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸಬೇಕು. ಕಲಿಕೆಯೊಂದಿಗೆ ಮಕ್ಕಳಿಗೆ ದೇಶಾಭಿಮಾನ, ಮೌಲ್ಯಗಳನ್ನು ಕಲಿಸಬೇಕು. ಶಿಕ್ಷಕರಿಗೆ ಸಮಾಜದಲ್ಲಿ ಅಪಾರ ಗೌರವವಿದೆ. ವೃತ್ತಿ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಯಲುಸೀಮೆ ಜನರ ಜೀವನ ಸುಧಾರಣೆಗೆ ಶಿಕ್ಷಣ ಆಧಾರವಾಗಬೇಕು. ಈ ದೃಷ್ಟಿಯಿಂದ ಗ್ರಾಮೀಣ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರಿ ತಾಂತ್ರಿಕ ವಿದ್ಯಾಲಯ ಸ್ಥಾಪಿಸಲಾಗಿದೆ. ಜಿಟಿಟಿಸಿ ಕೇಂದ್ರ, ವಸತಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಾಗಿದೆ. ಹೆಗ್ಗೆರೆ ತಾಯಮ್ಮ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಬಿಸಿನೀರು ಮುದ್ದಪ್ಪ ಪ್ರೌಢಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಉನ್ನತೀಕರಿಸಲಾಗಿದೆ. ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಎಂ. ಶಿವಲಿಂಗಪ್ಪ, ಬಿಇಒ ಕೆ.ಎಸ್. ಸುರೇಶ್, ನಗರಸಭೆ ಅಧ್ಯಕ್ಷೆ ಬಿ. ಶಿಲ್ಪಾ, ಉಪಾಧ್ಯಕ್ಷೆ ಸಿ. ಕವಿತಾ ಮಾತನಾಡಿದರು.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಮಲ್ಲಿಕಾರ್ಜುನ, ಸುಮಾ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಜಿಪಂ ಕೆಡಿಪಿ ಸಮಿತಿ ಸದಸ್ಯ ತಬಲಾ ರಂಗಸ್ವಾಮಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಸಿ.ಟಿ. ವೀರೇಶ್, ಕೆ. ವೀರಭದ್ರಯ್ಯ, ಆರ್. ಪ್ರಸನ್ನಕುಮಾರ್, ನೇತಾಜಿ ಪ್ರಸನ್ನ, ಬಡಗಿ ಪಾಪಣ್ಣ, ಜಾಕೀರ್‌ಹುಸೇನ್, ಎಂ. ರಮೇಶ್, ಸುರೇಶ್‌ಕುಮಾರ್, ಡಿ. ಶಬ್ರೀನಾ, ಎನ್. ಮಾರಣ್ಣ, ತಿಪ್ಪೇಸ್ವಾಮಿ ಇತರರು ಇದ್ದರು.
ರಾಜ್ಯ ಮಟ್ಟದ ಪ್ರಶಸ್ತಿ ತಾಲೂಕಿಗೆ ಸಂದ ದೊಡ್ಡ ಗೌರವ
ಹೊಸದುರ್ಗ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ರಾಜ್ಯಮಟ್ಟದ ಎಚ್.ಜಿ. ಗೋವಿಂದೇಗೌಡ ಪ್ರಶಸ್ತಿ ದೊರೆತಿರುವುದು ತಾಲೂಕಿಗೆ ಸಂದ ದೊಡ್ಡ ಗೌರವ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಸಂತಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಯೋಜಿಸಿದ್ದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಉತ್ತಮ ಶೈಕ್ಷಣಿಕ ಪರಿಸರ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶಾಲೆಯ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿದೆ. ಶಿಕ್ಷಕ ಆರ್. ಶಿವಶಂಕರ್ ಅವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಶಾಲೆಯ ಕೀರ್ತಿ ಹೆಚ್ಚಿಸಿದೆ ಎಂದರು.
ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು. ದೇಶದ ಭವಿಷ್ಯ ರೂಪಿಸುವ ಹೊಣೆ ಹಾಗೂ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ದೇಶದ ಆಸ್ತಿ ಆಗುತ್ತಾರೆ. ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಚಿಂತಕ ಡಾ. ಮೋಹನ್ ಮಾತನಾಡಿ, ಶಿಕ್ಷಣ ಮಾರಾಟದ ಸರಕಾಗಬಾರದು. ಪ್ರಸ್ತುತ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಸೋಲುತ್ತಿದೆ. ಮೌಲ್ಯ ಹಾಗೂ ಸಂಸ್ಕಾರಗಳು ಶಿಕ್ಷಣದಿಂದ ದೂರವಾಗಿರುವುದು ಇದಕ್ಕೆ ಕಾರಣ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ವಿಚಾರಗಳನ್ನು ತಿಳಿಸುವ ಕೆಲಸ ಮಾಡಿದರೆ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಶಿಕ್ಷಣದ ಮೂಲಕ ಮಾನವೀಯ ಗುಣಗಳನ್ನು ಬೆಳೆಸುವ ಕೆಲಸವಾಗಬೇಕು ಎಂದರು.
ಪುರಸಭಾಧ್ಯಕ್ಷೆ ರಾಜೇಶ್ವರಿ ಆನಂದ್, ಉಪಾಧ್ಯಕ್ಷೆ ಗೀತಾ ಗಜೇಂದ್ರ, ತಾಪಂ ಇಒ ಸುನಿಲ್ ಕುಮಾರ್, ಬಿಇಓ ಸೈಯದ್ ಮೋಸಿನ್, ನೌಕರರ ಸಂಘದ ಅಧ್ಯಕ್ಷ ಶಾಂತಕುಮಾರ್, ಕಸಾಪ ಅಧ್ಯಕ್ಷ ಎಂ.ಆರ್. ಶಾಂತಪ್ಪ ಇತರರಿದ್ದರು.