

ಹಾಸನ: 19ನೆ ಶತಮಾನದಲ್ಲಿ ಮಾನವ ದೇವರ ಸೃಷ್ಠಿಯಲ್ಲ ಕೋಟ್ಯಾಂತರ ವರ್ಷಗಳಲ್ಲಿ ಒಂದು ಜೀವಿಯಿಂದ ಇನ್ನೊಂದು ಜೀವಿಯಾಗಿ ವಿಕಾಸವಾಗಿ ಬಂದ ಕೂಸು ಮಾನವ ಎಂದು ನಿರೂಪಿಸಿ ಜಗತ್ತನ್ನು ನಿದ್ರೆಯಿಂದ ಎಬ್ಬಿಸಿ ಭೂವಾಸಿಗಳ ನಂಬಿಕೆಯ ತಿರುವನ್ನೇ ಬದಲಿಸಿದ ಮಹಾನುಭಾವ ಚಾರ್ಲ್ಸ್ ಡಾರ್ವಿನ್ ಎಂದು ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಹೇಳಿದರು.
ನಗರದ ಶಾಂತಿ ನಗರದ ಟ್ಯೂಟರ್ ಟ್ಯುಷನ್ ಸೆಂಟರ್‌ನಲ್ಲಿ ಇತ್ತೀಚೆಗೆ ಶಾಂತಿನಗರ ಬಿಜಿವಿಸ್ ಘಟಕ ಆಯೋಜಿಸಿದ್ದ ಚಾರ್ಲ್ಸ್ ಡಾರ್ವಿನ್ ರವರ 214ನೇ ಹುಟ್ಟಿದ ದಿನ, ಅಂತರಾಷ್ಟ್ರೀಯ ಡಾರ್ವಿನ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾರ್ವಿನ್ ಹೇಳಿದ ಮನುಷ್ಯನ ಕಥೆ ಕುರಿತು ಪಿಪಿಟಿ ಮೂಲಕ ವಿವರಿಸಿದರು.
1831 ಡಿಸೆಂಬರ್ 27 ಎಚ್.ಎಂ.ಎಸ್. ಬಿಗಲೆ ಸಮುದ್ರಯಾನ ಆರಂಭಿಸಿ ಅಟ್ಲಾಂಟಿಕ್ ಸಾಗರವನ್ನು ದಾಟಿ ದಕ್ಷಿಣ ಅಮೇರಿಕಾದ ಬಹಿಯ ಪ್ರಾಂತ ತಲುಪಿತು ಸಾಗರ ಕಿನಾರೆಯ ಈ ಪ್ರದೇಶದಲ್ಲಿ ಡಾರ್ವಿನ್ಗೆ ಅಲ್ಲಿನ ಪ್ರಾಣಿ-ಪಕ್ಷಿ ಸಂಕುಲ, ಕ್ರಿಮಿ-ಕೀಟ, ಗಿಡ-ಮರಗಳ ಹಾಗೂ ತನ್ನೂರಿನ ಸಂಕುಲಗಳ ನಡುವಿನ ಭಿನ್ನತೆ ನೋಡಿ ಆಶ್ಚರ್ಯ ಹಾಗೂ ಸಂತೋಷವಾಯಿತು ಹೀಗೆ ಡಾರ್ವಿನ್ ಆರೇಳು ವರ್ಷಗಳ ಕಾಲ ಪರ್ಯಟನೆ ಮಾಡಿ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿ ಗ್ಯಾಲಪಾಗಸ್ ದ್ವೀಪದ ಸಮೂಹ ಸುತ್ತಾಡಿ ಮನುಷ್ಯನ ವಿಕಾಸ ಬೈಬಲನ ಸೂಕ್ತಿಯಿಂದಲ್ಲ ಎಂದು ನಿರೂಪಿಸಿ ಕೋಟ್ಯಾಂತರ ವರ್ಷಗಳ ಅವಧಿಯಲ್ಲಿ ಒಂದು ಜೀವಿ ಇನ್ನೊಂದು ಜೀವಿಯಾಗಿ ಮಾರ್ಪಾಡು ಹೊಂದಿ ವಿಕಾಸಹೊಂದಿ ಬಂದಿದೆ ಎಂದು ಸಾಬೀತು ಪಡಿಸಿದರು ಎಂದು ತಿಳಿಸಿದರು.
ಇಲ್ಲಿಯವರೆಗೂ ಮನುಷ್ಯನ ಹುಟ್ಟಿಗೆ ಯಾವುದೇ ಸ್ಪಷ್ಟ ಆಧಾರಗಳಿರಲಿಲ್ಲ ಆದರೆ ಡಾರ್ವಿನ್ ಸುಸಜ್ಜಿತವಾದ ಆಧಾರ ಸರಣಿಯನ್ನು ಸೃಷ್ಠಿ ಮಾಡಿ ತನ್ನ ಎರೆಡು ಮಹತ್ತರ ಪುಸ್ತಕಗಳಾದ ಜೀವಸಂಕುಲಗಳ ಉಗಮ ಹಾಗೂ ಮಾನವನ ವಿಕಾಸದಲ್ಲಿ ದಾಖಲಿಸಿದರು ಇವರ ಸಂಶೋಧನೆಯ ಫಲವಾಗಿ ಜೀವಶಾಸ್ತ್ರ ವೈವಿಧ್ಯಮಯವಾಗಿ ಬೆಳೆಯಿತು ಗ್ರೆಗರ್ ಮೆಂಡಲ್ ತರದ ವಿಜ್ಞಾನಿಗಳು ದಂಡು ದಂಡಾಗಿ ಬೆಳೆದು ಬರಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದ ಉದ್ಘಾಟನೆ ಬಹಳ ವಿಶೇಷವಾಗಿತ್ತು ಭಾಗವಹಿಸಿದ್ದ ಮಕ್ಕಳಿಂದ ಚೀಟಿಯನ್ನು ಎತ್ತಿಸಲಾಯಿತು ಯಾವ ಮಗುವಿನ ಚೀಟಿಯಲ್ಲಿ ಡಾರ್ವಿನ್ ಹೆಸರಿತ್ತೊ ಆ ಮಗುವಿಗೆ ಡಾರ್ವಿನ್ ಮುಖವಾಡ ತೊಡಿಸಿ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ನಿರೂಪಿಸಿ ಪ್ರಾಸ್ತವಿಕವಾಗಿ ಮಾತನಾಡಿದ ಸಂಚಾಲಕಿ ಕವಿತ, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಬೇಕಾದದ್ದು ಸಾಂವಿಧಾನಿಕ ಕರ್ತವು ಫೆ. 12ರಿಂದ 28ರವರೆಗೆ ಮೂರು ಮಹತ್ತರ ವಿಜ್ಞಾನಿಗಳ ಕಾರಣಕ್ಕಾಗಿ ಜಾಗತಿಕ ವಿಜ್ಞಾನ ಮಾನವನ ಬದುಕನ್ನ ಹಸನುಗೊಳಿಸುತ್ತಾ ಸಾಗಿದೆ . ಆ ಮಹಾನ್ ವಿಜ್ಞಾನಿಗಳಲ್ಲಿ ಡಾರ್ವಿನ್, ಗೆಲೆಲಿಯೋ ಮತ್ತು ರಾಮನ್‌ರ ಸಂಶೋಧನೆಯಗಳನ್ನು ಮಕ್ಕಳಿಗೆ ತಿಳಿಸಿ ಆ ಮೂಲಕ ಭಾರತಕ್ಕೆ ವಿಜ್ಞಾನಿಗಳಾಗಲು ಪ್ರರೇಪಿಸುವ ನಿಟ್ಟಿನಲ್ಲಿ ವಿಜ್ಞಾನ ವಿಕಸನ ಕಥನ ಘೋಷಣೆಯಡಿ ಈ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಂತಿನಗರ ಘಟಕದ ಅಧ್ಯಕ್ಷ ತಿಮ್ಮಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯ ಜಯಪ್ರಕಾಶ್ ಹಾಗೂ ಇತರರು ಇದ್ದರು.