ಮಾನವ ಕಳ್ಳಸಾಗಣೆಗೆ ಹಲವರು ಬಲಿಪಶು

18
Published on

ಮೈಸೂರು: ಪ್ರಪಂಚದಾದ್ಯಂತ ಸಮಾಜದ ಎಲ್ಲ ವರ್ಗ, ಧರ್ಮ, ಜಾತಿಯ ಜನ ಮಾನವ ಕಳ್ಳಸಾಗಣೆ ಜಾಲಕ್ಕೆ ಬಲಿ ಪಶು ಆಗಿದ್ದಾರೆ ಎಂದು ಒಡನಾಡಿ ಸಂಸ್ಥೆಯ ಸ್ಥಾಪಕ ನಿರ್ದೇಶಕ ಕೆ.ವಿ.ಸ್ಟಾೃನ್ಲಿ ಹೇಳಿದರು.


ಮಾನವ ಕಳ್ಳಸಾಗಣೆ ತಡೆ ದಿನದ ಪ್ರಯುಕ್ತ ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ಭಯಾನಕ ಹಾಗೂ ಕ್ರೂರವಾದಂತಹ ಮಾನವ ವಿರೋಧಿ ಚಟುವಟಿಕೆಗಳಲ್ಲಿ ಮಾನವ ಕಳ್ಳಸಾಗಣೆಯೂ ಒಂದಾಗಿದೆ. ನಾಗರಿಕ ಸಮಾಜ ಬೆಳೆದಂತೆಲ್ಲ ಈ ರೀತಿಯ ಶೋಷಣೆ ಹಾಗೂ ಹಿಂಸೆ ಪ್ರಾರಂಭವಾಯಿತು. ಇಂತಹ ಬಲಿಪಶುಗಳು ನ್ಯಾಯ ಪಡೆಯಲಾರದ ಸ್ಥಿತಿಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.


ನೈತಿಕ, ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳಿಲ್ಲದೆ ಇರುವ ವ್ಯಕ್ತಿಯು ಯಾವುದೇ ಕ್ಷೇತ್ರ, ವೃತ್ತಿ ಅಥವಾ ಉದ್ಯೋಗದಲ್ಲಿದ್ದರೂ ಆತ ಮಾನವ ಕಳ್ಳಸಾಗಣೆ ಪೋಷಕನಾಗಿರುತ್ತಾನೆ. ಪ್ರಾಚೀನ ಕಾಲದಿಂದಲೂ ಮಾನವ ಕಳ್ಳಸಾಗಣೆ ಉದಾಹರಣೆಗಳನ್ನು ನೋಡಬಹುದು. ಇದಕ್ಕೆ ಬಡತನದ ಒಂದೇ ಕಾರಣವಲ್ಲ. ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ಸೇರಿದಂತೆ ನೂರಾರು ಕಾರಣಗಳಿವೆ ಎಂದು ಹೇಳಿದರು.


ಲೈಂಗಿಕ ಶೋಷಣೆ, ಮಾನವ ಅಂಗಾಂಗಗಳ ಮಾರಾಟ, ಅಂಗ ವಿಚ್ಛೇದಿಸಿ ಭಿಕ್ಷಾಟನೆ, ಕಡಿಮೆ ವೇತನಕ್ಕೆ ದುಡಿಸಿಕೊಳ್ಳುವಿಕೆ, ಅಶ್ಲೀಲ ಚಿತ್ರ ನಿರ್ಮಾಣಕ್ಕಾಗಿಯೂ ಕೆಲವರನ್ನು ಬಳಸಿಕೊಂಡು ಶೋಷಣೆ ಮಾಡಲಾಗುತ್ತಿದೆ. ಇದು ಸ್ಥಳೀಯವಾಗಿ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ತಿಳಿಸಿದರು.


ಪ್ರಾಂಶುಪಾಲ ಡಾ.ಪಿ.ದೀಪು, ನಿರ್ದೇಶಕ ಪ್ರೊ.ಕೆ.ಬಿ.ವಾಸುದೇವ, ಕಾರ್ಯಕ್ರಮದ ಸಂಯೋಜಕ ಡಾ.ಎನ್.ಜೆ.ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net