

ಬೆಂಗಳೂರು ಗ್ರಾಮಾಂತರ: ಅನಕ್ಷರತೆ, ಆರ್ಥಿಕ ದುರ್ಬಲತೆ ಹಾಗೂ ವಲಸೆಯಂತಹ ಸಮಸ್ಯೆಗಳಿಂದಾಗಿ ಮಾನವ ಕಳ್ಳಸಾಗಣೆಯಂತಹ ಹೀನ ಕೃತ್ಯಗಳು ನಡೆಯುತ್ತಿದ್ದು, ಇದನ್ನು ತಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ಜಿಪಂ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಮಹಿಳೆಯರು ಮತ್ತು ಮಕ್ಕಳ ಅಕ್ರಮ ಸಾಗಣೆ ತಡೆಗಟ್ಟುವಿಕೆ ಕುರಿತು ಕ್ರಮಬದ್ಧ ಕಾರ್ಯವಿಧಾನ ಮಾರ್ಗಸೂಚಿ ಕಾರ್ಯಾಗಾರ ಮತ್ತು ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮ ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರು ಕೆಲಸ ಅರಸಿ ವಲಸೆ ಹೋಗುವುದನ್ನು ತಡೆಯಲು ಗ್ರಾಪಂಮಟ್ಟದಲ್ಲಿ ಜಾಬ್ ಕಾರ್ಡ್ ನೀಡಿ, ಉದ್ಯೋಗ ಒದಗಿಸುತ್ತಿರುವುದು ಉತ್ತಮ ಕಾರ್ಯ. ಹಾಗೆಯೇ ದೇವದಾಸಿ ಪದ್ಧತಿಗೆ ಒಳಗಾದ ಮಹಿಳೆಯರನ್ನು ರಕ್ಷಿಸಿ ಹಾಗೂ ಅವರನ್ನು ಸಶಕ್ತಗೊಳಿಸಲು ಮಾಸಾಶನ ನೀಡಲಾಗುತ್ತಿದೆ ಎಂದು ಹೇಳಿದರು.
ಮೂಢನಂಬಿಕೆ ಹೆಸರಿನಲ್ಲಿ ನಡೆಯುವ ಬಾಲ್ಯವಿವಾಹ ನಿಷೇಧದ ಬಗ್ಗೆ ಜಿಲ್ಲೆಯ ಪ್ರತಿಯೊಂದು ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಿ, ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣಪ್ಪ ಮಾತನಾಡಿ, ಮಾನವ ಕಳ್ಳಸಾಗಣೆ ತಡೆಗಟ್ಟಲು ಕೇಂದ್ರ ಸರ್ಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ರಕ್ಷಣಾಧಿಕಾರಿ ಹುದ್ದೆ ಸೃಜನೆ ಮಾಡಿ, ಪೊಲೀಸ್ ಇಲಾಖೆ ನೆರವಿನೊಂದಿಗೆ ಎ್ಐಆರ್ ದಾಖಲಿಸಿ, ತನಿಖೆ ಕೈಗೊಳ್ಳಲು ಆದೇಶಿಸಿದೆ ಎಂದು ಹೇಳಿದರು.
ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಹಾಗೂ ಮಾನವ ಕಳ್ಳಸಾಗಣೆ ಕುರಿತು ಅರಿವು ಮೂಡಿಸುವಲ್ಲಿ ಸರ್ಕಾರೇತರ ಸಂಸ್ಥಗಳ ಪಾತ್ರ ಪ್ರಮುಖವಾಗಿದ್ದು, ಆಶಾ ಕಾರ್ಯಕರ್ತೆಯರ ಮೂಲಕ ಬಾಲ್ಯ ವಿವಾಹದ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ವಿಜಯಾ ಇ.ರವಿಕುಮಾರ್ ಮಾತನಾಡಿ, ಮಾನವ ಕಳ್ಳಸಾಗಣೆ ಸಂಘಟಿತ ಅಪರಾಧವಾಗಿದ್ದು, ದುರ್ಬಲ, ಅಶಕ್ತ, ಅನಕ್ಷರಸ್ಥ ಹಾಗೂ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು, ಮಕ್ಕಳು ಇಂತಹ ಜಾಲಕ್ಕೆ ಒಳಗಾಗುತ್ತಿದ್ದು, ಅವರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುನಿಕೃಷ್ಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎ.ತಿಪ್ಪೇಸ್ವಾಮಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮು ಜೋಗಿಹಳ್ಳಿ, ಜಿಲ್ಲಾ ಮಟ್ಟದ ಸ್ಥಳೀಯ ದೂರು ನಿವಾರಣಾ ಸಮಿತಿ ಅಧ್ಯಕ್ಷ ಅಮಲಿ ನಾಯಕ್, ಸಂಪನ್ಮೂಲ ವ್ಯಕ್ತಿಗಳಾಗಿ ಸ್ಟೇಟ್ ಹೈ ಪವರ್ ಕಮಿಟಿ ಆನ್ ಹ್ಯೂಮನ್ ಟ್ರ್ಯಾಪಿಕಿಂಗ್ ಸಮಿತಿ ಸದಸ್ಯೆ ಡಾ.ಮೀನಾ ಜೈನ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ ಚಿನ್ನಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ನಟರಾಜ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜಗದೀಶ್ ಇದ್ದರು.