ಮಾನವ ಕಳ್ಳ ಸಾಗಾಣಿಕೆ ತಡೆಯಲು ಕೈಜೋಡಿಸಿ

bkt-30-5.
Published on

ಬಾಗಲಕೋಟೆ: ರಾಜ್ಯವನ್ನು ಮಾನವ ಕಳ್ಳ ಸಾಗಾಣಿಕೆ ಮುಕ್ತವಾಗಿಸಲು, ಕೇವಲ ಒಂದು ದಿನ ಆಚರಣೆಗೆ ಸೀಮಿತವಾಗದೇ ವರ್ಷವಿಡಿ ಕಾರ್ಯೋನ್ಮುಖವಾಗಬೇಕು, ಒಂದು ಸಣ್ಣ ಮಟ್ಟದ ಮಾಹಿತಿ ದೊಡ್ಡ ಮಟ್ಟದ ಸುಧಾರಣೆಗೆ ಸಹಾಯವಾಗಲಿದೆ, ಮಾನವ ಕಳ್ಳ ಸಾಗಾಣಿಕೆ ಎನ್ನುವ ಸಾಮಾಜಿಕ ಪಿಡುಗು ತೊಲಗಿಸಲು ಕೈಜೋಡಿಸಿ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಹೇಳಿದರು.

ವಿದ್ಯಾಗಿರಿಯ ಕೋಟೆಕ್ ಮಹೇಂದ್ರ ಆರ್.ಸೆಟ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಬವ್ಹಿವ್ಹಿ ಸಂಘದ ಆರ್ ಸೆಟ್ ಮಹಿಳಾ ಸಾಂತ್ವನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.

ಮಾನವ ಕಳ್ಳ ಸಾಗಾಣಿಕೆ ಕಂಡುಬಂದಲ್ಲಿ ಜನತೆ ತಕ್ಷಣವೇ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ಎಂದರು.
ಮುಖ್ಯ ಅತಿಥಿ ಉಪವಿಭಾಗಾಧಿಕಾರಿ ಶ್ವೇತಾ ಬಿಡ್ಕರ್ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಕಾನೂನು ಬಾಹಿರ ಕೃತ್ಯ, ಅಮಾಯಕ, ಅಪ್ರಾಪ್ತರನ್ನು ವಂಚಿಸಿ ದುರುಪಯೋಗ ಪಡಿಸಿಕೊಳ್ಳುವ ಜಾಲ ಹೆಚ್ಚಾಗಿದೆ.ನಮ್ಮ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳಿಲ್ಲ, ಮಾನವ ಕಳ್ಳ ಸಾಗಾಣಿಕೆ ತಡೆಗೆ ಎಲ್ಲರೂ ಕೈಜೋಡಿಸಬೇಕು.ಮಕ್ಕಳಿಗೆ ಸಂಬಂಧಿಸಿದ ಕಳ್ಳ ಸಾಗಾಣಿಕೆ ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ -1098, ಹಾಗೂ ಪೊಲೀಸ್ ಸಹಾಯವಾಣಿ 112,ಮಹಿಳಾ ಸಹಾಯವಾಣಿ -181ಗೆ ಕರೆ ಮಾಡಿ ಮಾಹಿತಿ ನೀಡಿ ಎಂದರು.

ಹಿರಿಯ ದಿವಾಣಿ ನ್ಯಾಯಾಧೀಶ ದ್ಯಾವಪ್ಪ ಎಸ್ ಸಿ, ಮಾತನಾಡಿ, ವಸ್ತುಗಳನ್ನು ಸಾಗಿಸುವಂತೆ ಮಾನವ ಕಳ್ಳ ಸಾಗಾಣಿಕೆ ಮಾಡುವುದು ಕಾನೂನು ಬಾಹಿರ, ಇದು ತೊಲಗಲು ಎಲ್ಲರ ಜವಾಬ್ದಾರಿಯಿದೆ.ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಇಂತಹ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ಕಠಿಣ ಕಾನೂನು ಕ್ರಮವಿದೆ ಎಂದರು.ಆರ್ ಸೆಟ್ ಕಾರ್ಯ ನಿರ್ವಾಹಕ ನಿರ್ದೇಶಕ ಡಾ, ಬಿ ಎಸ್ ಅಂಗಡಿ ಮಾತನಾಡಿ, ಮಹಿಳೆ, ಮಕ್ಕಳ ಮೇಲೆ ಲೈಂಗಿಕ ಶೋಷಣೆ, ವೇಶ್ಯಾವಾಟಿಕೆ, ಬಲವಂತದ ದುಡಿಮೆ, ಬಾಲಕಾರ್ಮಿಕತೆಯಂತಹ ಕಳ್ಳಸಾಗಣೆ ಮಾಡುವುದು ಒಂದು ಸಂಘಟಿತ ಅಪರಾಧವಾಗಿದೆ ಎಂದರು.

ಕಾರ್ಯಕ್ರಮ ವೇದಿಕೆಯಲ್ಲಿ ‌ಸಿಪಿಐ ಶೋಭಾ ಕೆಟಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗತಿ ಸರ್ಕಾರಿ ಬಾಲ ಮಂದಿರದ ಅಧೀಕ್ಷಕರಾದ ಜಯಮಾಲಾ ದೊಡ್ಡಮನಿ ಶ್ರೀ ಶರಣಬಸವ ಹೊನ್ನೂರ್ ನಿರ್ದೇಶಕರು ಆರ್ ಸೆಟ್ ಇದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ ಎಚ್ ಸ್ವಾಗತಿಸಿದರು, ಸಖಿ ಕೇಂದ್ರದ ಆಡಳಿತಾಧಿಕಾರಿ ಎಸ್ ಆರ್ ಜಮ್ಮನಕಟ್ಟಿ ನಿರೂಪಿಸಿದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಸ್ತಗಿರಿ ಮುಲ್ಲಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net